ಪೇಜಾವರ ಶ್ರೀಗಳಿಂದ ಅನವಶ್ಯಕ ಗೊಂದಲ ಸೃಷ್ಟಿ: ಜಾಮದಾರ್

Update: 2017-10-20 13:35 GMT

ಬೆಂಗಳೂರು, ಅ.20: ಪೇಜಾವರ ಶ್ರೀ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ್ ಕಿಡಿಕಾರಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರ ಸ್ವತಂತ್ರ ಧರ್ಮದ ಮಾನ್ಯತೆ ವಿಚಾರದಲ್ಲಿ, ಸಂಬಂಧ ಇಲ್ಲದವರು ಮೂಗು ತೂರಿಸುತ್ತಿದ್ದಾರೆ. ಲಿಂಗಾಯತರು ಹಿಂದೂಗಳಿಗಿಂತ ಹೇಗೆ ಭಿನ್ನ ಎಂಬ ಬಗ್ಗೆ ಯಾವುದೇ ಚರ್ಚೆಗೂ ನಾನು ಸಿದ್ಧ. ಚರ್ಚೆಗೆ ಸಿದ್ಧ ಇರುವವರು ದಿನಾಂಕ, ಸಮಯವನ್ನು ಗೊತ್ತುಪಡಿಸಲಿ ಎಂದು ಸವಾಲು ಹಾಕಿದರು.

ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ. ಪುರಾಣ, ವೇದಗಳನ್ನು ಲಿಂಗಾಯತರು ಒಪ್ಪುವುದಿಲ್ಲ. ಹಿಂದೂ ಧರ್ಮದ ಒಳಗೆ ಇರದ ಲಿಂಗಾಯತರು ಹೊರಗೆ ಹೋಗುವ ಮಾತೇ ಇಲ್ಲ. ನಾವು ದೇಶ ಬಿಟ್ಟು ಹೋಗುತ್ತಿಲ್ಲ. ಇದನ್ನು ಪೇಜಾವರ ಶ್ರೀಗಳು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪೇಜಾವರ ಶ್ರೀ, ಸಾಹಿತಿ ಎಸ್.ಎಲ್.ಬೈರಪ್ಪ, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಅನವಶ್ಯಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಗೊಂದಲವಿರುವವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲೇ ಚರ್ಚೆ ನಡೆಸಲಿ, ಲಿಂಗಾಯತರು ಹಿಂದೂಗಳಿಗಿಂತ ಹೇಗೆ ಭಿನ್ನರಾಗಿದ್ದಾರೆ ಎಂಬುದನ್ನು ಮನವರಿಕೆ ಮಾಡಲು ಸಿದ್ಧ ಎಂದು ಹೇಳಿದರು.

ಪ್ರತ್ಯೇಕ ಸ್ಥಾನ ಮಾನಕ್ಕಾಗಿ ಲಿಂಗಾಯತರು ಹೋರಾಟ ನಡೆಸುತ್ತಿದ್ದರೆ, ಬಿಜೆಪಿ, ಆರೆಸ್ಸೆಸಿಗರಿಗೆ ಭಯ ಶುರುವಾಗಿದೆ. ಈ ಹಿಂದೆ ಶಿಖ್ ಧರ್ಮ, ಬೌದ್ಧ ಧರ್ಮ, ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಾಗ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಡುತ್ತಿರುವ ಲಿಂಗಾಯತರು ಏನು ಭಯೋತ್ಪಾದಕರೆ?, ದೇಶ ದ್ರೋಹಿಗಳೆ?, ರಾಷ್ಟ್ರ ಭಕ್ತಿಗೆ ಭಂಗ ತರುವವರೇ? ಎಂದು ಖಾರವಾಗಿ ಪ್ರಶ್ನಿಸಿದರು.

ಪುರಾಣಗಳು ‘ಪುಂಡರ ಗೋಷ್ಠಿ’: ಲಿಂಗಾಯತರು ಪುರಾಣ, ವೇದಗಳನ್ನು ಒಪ್ಪುವುದಿಲ್ಲ. ಶರಣರು ಹೇಳಿರುವಂತೆ ಪುರಾಣಗಳು ಪುಂಡರ ಗೋಷ್ಠಿ. ಲಿಂಗಾಯತರು ಆರಾಧಿಸುವ ಶಿವನ ಪರಿಕಲ್ಪನೆಯು ಇಂದು ಹಿಂದೂಗಳು ಪೂಜಿಸುವ ಶಿವನ ಪರಿಕಲ್ಪನೆಗಿಂತ ತೀರಾ ಭಿನ್ನವಾಗಿದೆ. ಲಿಂಗಾಯತರು ಲಿಂಗ ರೂಪದಲ್ಲಿ ಪೂಜಿಸಿದರೆ, ಹಿಂದೂಗಳು ದೇವಾಲಯಗಳಲ್ಲಿ ಅರ್ಚಕರ ನೆರವಿನಿಂದ ಪೂಜೆ ಮಾಡುತ್ತಾರೆ. ಲಿಂಗಾಯತರ ಶಿವ ನಿರಾಕಾರ ಶಿವ. ಹಿಂದೂಗಳ ಶಿವ ಸಾಕಾರ ಶಿವ ಎಂದು ಹೇಳಿದರು.

ಲಿಂಗಾಯತರು ಯಜ್ಞ-ಯಾಗಾದಿ, ಹೋಮ-ಹವನ, ಮಡಿ ಮೈಲಿಗೆ, ಮುಹೂರ್ತ-ಸುಮುಹೂರ್ತಗಳನ್ನು ನಂಬುವುದಿಲ್ಲ. ಜನ್ಮ ಪುನರ್ಜನ್ಮಗಳಿಲ್ಲ, ಲಿಂತಾಯತರು ಸತ್ತಾಗ ಲಿಂಗೈಕ್ಯರಾಗುತ್ತಾರೆ. ಕೈಲಾಸವಾಸಿಗಳಾಗುವುದಿಲ್ಲ ಎಂದು ಹಿಂದೂ ಮತ್ತು ಲಿಂಗಾಯತ ಧರ್ಮದ ನಡುವಿನ ಭಿನ್ನತೆಯನ್ನು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಬಿ.ಪಾಟೀಲ್, ಡಾ.ಜಯಣ್ಣ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News