ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 'ಟಿಪ್ಪು ಜಯಂತಿ' ರದ್ದು: ಪ್ರಹ್ಲಾದ್ ಜೋಶಿ

Update: 2017-10-20 13:51 GMT

ಬೆಂಗಳೂರು, ಅ.20: ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರಕಾರ ಯಾವುದೇ ಸಾಧನೆ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೇ ಕೊನೆಯ ದೀಪಾವಳಿ ಎಂದು ಸಂಸದ ಪ್ರಹ್ಲಾದ್ ಜೋಶಿ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಯಾವುದೇ ಸಾಧನೆ ಮಾಡಿಲ್ಲ. ಹೀಗಾಗಿ ಇಲ್ಲದ ಸಾಧನೆ ತೋರಿಸಲು 'ಮನೆ ಮನೆಗೆ ಕಾಂಗ್ರೆಸ್' ಅಭಿಯಾನ ಕೈಗೊಂಡಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಸರಕಾರ 'ಮನೆ ಮನೆಗೆ ಕಾಂಗ್ರೆಸ್' ಅಭಿಯಾನದ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಯಾವ ಭರವಸೆಯನ್ನು ಈಡೇರಿಸದೆ ಸಾಕಾರ ಸಮಾವೇಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಟಿಪ್ಪು ಜಯಂತಿ ರದ್ದು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಸುಲ್ತಾನ್ ಜಯಂತಿ ರದ್ದುಗೊಳಿಸಲಾಗುವುದು ಎಂದ ಅವರು, ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಆದರೆ, ರಾಜ್ಯ ಸರಕಾರ ಹಠಕ್ಕೆ ಬಿದ್ದು ಜಯಂತಿ ಆಚರಣೆಗೆ ಮುಂದಾಗಿದೆ ಎಂದು ದೂರಿದರು.

ಟಿಪ್ಪು ಸುಲ್ತಾನ್ ಕನ್ನಡ ಭಾಷೆ, ಸಂಸ್ಕೃತಿಯ ವಿರೋಧಿಯಾಗಿದ್ದ. ಇಂತಹ ವ್ಯಕ್ತಿಯ ಜಯಂತಿಯ ಆಚರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡಲಾಗುವುದು ಎಂದು ಪುನರುಚ್ಚರಿಸಿದರು.

ಭ್ರಷ್ಟ ಎಂದರೆ ಸಹಿಸುವುದಿಲ್ಲ: ತನ್ನ ವಿರುದ್ಧ ಯಾವುದೇ ರಾಜಕೀಯ ಟೀಕೆ ಮಾಡಿದರೂ ಸಹಿಸಿಕೊಳ್ಳುವೆ. ಆದರೆ, ಭ್ರಷ್ಟ ಎಂದರೆ ಯಾವುದೇ ಕಾರಣಕ್ಕೂ ನಾನು ಸಹಿಸುವುದಿಲ್ಲ ಎಂದ ಪ್ರಹ್ಲಾದ್ ಜೋಶಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರೇಮಠ್ ಆರೋಪ ಮಾಡಿದರೆ ಬೇರೆಯವರು ಸಹಿಸಿಕೊಳ್ಳಬಹುದು. ಆದರೆ, ತಾನು ಸಹಿಸುವುದಿಲ್ಲ. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕೋರ್ಟ್ ಅವರಿಗೆ ದಂಡ ವಿಧಿಸಿದೆ. ಹೀಗಾಗಿ ಅವರು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಯಾವುದೇ ಭ್ರಷ್ಟಾಚಾರ ಮಾಡದಿದ್ದರೂ ಆರೋಪ ಸಹಿಸಿಕೊಳ್ಳಬೇಕೇ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News