ಸರ್ವಜ್ಞ ನಗರದ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಅಭಿಯಾನ: ಅಬ್ದುಲ್ ಹನ್ನಾನ್

Update: 2017-10-20 14:13 GMT

ಬೆಂಗಳೂರು, ಅ.20: ಬೆಂಗಳೂರಿನ ಸರ್ವಜ್ಞ ನಗರಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

ಶುಕ್ರವಾರ ಸರ್ವಜ್ಞ ನಗರದ ನಾಗವಾರ ವಾರ್ಡಿನಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಆಯೋಜಿಸಿದ್ದ ಸರ್ವಜ್ಞ ನಗರದ ಮೂಲಭೂತ ಸೌಕರ್ಯಗಳ ಕುರಿತು ನಡೆದ ಸಭೆಯಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವಜ್ಞನಗರ ಪ್ರಮುಖ ಕ್ಷೇತ್ರವಾಗಿದ್ದು, ದಲಿತರು, ಮುಸ್ಲಿಮರು, ಕ್ರೈಸ್ತರು ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುತ್ತಾರೆ. ಇಲ್ಲಿನ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಗಮನ ಕೊಡುತ್ತಿಲ್ಲ ಎಂದು ವಿಷಾದಿಸಿದರು.

ಇಲ್ಲಿನ ಜನತೆಗೆ ಕನಿಷ್ಠ ಮುಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಸಂಚಾರ ನಿಯಂತ್ರಣ, ಚರಂಡಿ, ಕಸದ ವಿಲೇವಾರಿ, ಪಾರ್ಕ್‌ಗಳ ನಿರ್ವಹಣೆ, ಸರಕಾರಿ ಶಾಲಾ ಕಾಲೇಜುಗಳು, ಆಸ್ಪತ್ರೆ, ಬ್ಯಾಂಕ್ ಇತ್ಯಾದಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಸ್‌ಡಿಪಿಐ ಅಭಿಯಾನ ನಡೆಸಲಿದೆ ಎಂದರು.

ಕ್ಷೇತ್ರದ ಜನಪರ ಚಿಂತಕರು, ಧಾರ್ಮಿಕ ವಿದ್ವಾಂಸರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ವಿಚಾರ ನಿಮಯ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಜನಪರ ಹೋರಾಟ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾ ನಾಯಕರಾದ ಮುಝಮ್ಮಿಲ್, ಸೆಯ್ಯದ್ ಅಬ್ಬಾಸ್ ಪಾಷಾ, ಅಸ್ಗರ್ ಅಹ್ಮದ್, ಪೈರೋಝ್ ಪಾಷಾ ಹಾಗೂ ಸಮೀವುಲ್ಲಾ ಸೇರಿದತೆ ಕ್ಷೇತ್ರದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News