ವೇತನ ಕೇಳಿದ್ದಕ್ಕೆ ಹಲ್ಲೆ ಪ್ರಕರಣ: 7 ಮಂದಿ ಬಂಧನ

Update: 2017-10-20 14:14 GMT

ಬೆಂಗಳೂರು, ಅ.20: ವೇತನ ಕೇಳಿದ್ದಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಇಲ್ಲಿನ ಕೆ.ಆರ್.ಪುರ ಪೊಲೀಸರು ಏಳು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಕೆ.ಆರ್.ಪುರ ನಿವಾಸಿಗಳಾದ ಅಯ್ಯಪ್ಪ, ಅಕ್ಷಯ್, ಸಾದಿಕ್, ರಾಜೇಶ್, ವೆಂಕಟೇಶ್, ಅಬ್ದುಲ್, ರಫೀಕ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಕೆ.ಆರ್.ಪುರದ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ನಾಗೇಶ್‌ಕುಮಾರ್ ಹಾಗೂ ಮೇಸ್ತ್ರಿ ನಂದೀಶ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.

ಬಂಧಿತರು ಪೌರಕಾರ್ಮಿಕರ ನಿರ್ವಹಣೆಯ ಕೆಲಸವನ್ನೂ ನೋಡಿಕೊಳ್ಳುತ್ತಿದ್ದರು. ಗುತ್ತಿಗೆದಾರರ ಸೂಚನೆಯಂತೆಯೇ ಬಂಧಿತರು ಪೌರಕಾರ್ಮಿಕರನ್ನು ನಿಂದಿಸಿ ಹಲ್ಲೆ ಮಾಡಿದ್ದರು. ಹೀಗಾಗಿ, ಅವರನ್ನು ವಶಕ್ಕೆ ಪಡೆದಿದ್ದೇವೆ. ತಲೆಮರೆಸಿಕೊಂಡವರಿಗೆ ಶೋಧ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಹಿನ್ನಲೆ: ಸಂಬಳ ನೀಡದ ಬಗ್ಗೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಇದರಿಂದ ಕೋಪಗೊಂಡ ಗುತ್ತಿಗೆದಾರ ನಾಗೇಶ್, ಮೇಸ್ತಿಗಳಾದ ಅಕ್ಷಯ್, ನಂದೀಶ್ ಹಾಗೂ ಸಾದಿಕ್ ಅ.19ರ ಗುರುವಾರ ಕಾರ್ಮಿಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News