×
Ad

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್ ಟಿ ಕಡಿಮೆ ಮಾಡಲು ಪ್ರಧಾನಿ ಮುಂದಾಗಿದ್ದಾರೆ

Update: 2017-10-20 20:25 IST

ಬೆಂಗಳೂರು, ಅ. 20: ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕಡಿಮೆ ಮಾಡಲು ಮುಂದಾಗಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಜಿಎಸ್ಟಿ ಕಡಿಮೆ ಮಾಡಲು ನಾವು ಒತ್ತಾಯ ಮಾಡಿದರೂ, ಕಡಿಮೆ ಮಾಡಲಿಲ್ಲ. ಇದರಿಂದ ಜನರಿಗೆ ತೊಂದರೆ ನೀಡಿದ್ದು ಆಯಿತು. ಇದೀಗ ಗುಜರಾತ್ ಚುನಾವಣೆ ಕಾರಣಕ್ಕೆ ಜಿಎಸ್ಟಿ ಕಡಿಮೆ ಮಾಡಲು ಹೊರಟಿದ್ದಾರೆಂದು ಆಕ್ಷೇಪಿಸಿದರು.

ದೇಶಕ್ಕೆ ಹಿಂದಿನವರು ಸಾಕಷ್ಟು ಸಾಧನೆ ಮಾಡಿದ್ದಕ್ಕೇ ಭಾರತ ದೇಶ ಇಂದು ಈ ಸ್ಥಿತಿಯಲ್ಲಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಕೇದಾರನಾಥ್ ಪ್ರಕೃತಿ ವಿಕೋಪದ ವೇಳೆ ಅಂದಿನ ಯುಪಿಎ ಸರಕಾರ ಏನು ಮಾಡಲಿಲ್ಲ ಎಂದು ಹೇಳಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನಾನು ರೈಲ್ವೆ ಮಂತ್ರಿಯಾಗಿದ್ದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಗುಜರಾತ್ ಜನತೆಗೆ ಅಲ್ಲಿ ತೊಂದರೆಯಾಗಿದೆ ಎಂದಾಗ ನಾನೆ ಎರಡು ವಿಶೇಷ ರೈಲು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೆ. ಇದು ಇಂದು ಉದಾಹರಣೆ ಅಷ್ಟೇ ಎಂದು ತಿಳಿಸಿದರು.

ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ಅತ್ಯಂತ ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಮಾತ್ರ ಏಕೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಬರುವವರಿಗೆ ಸ್ವಾಗತ: ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರು ಬಂದರೂ ಸ್ವಾಗತ. ಆದರೆ, ಬಂದವರಿಗೆಲ್ಲ ಚುನಾವಣೆಯಲ್ಲಿ ಟಿಕೆಟ್ ನೀಡಲು ಆಗುವುದಿಲ್ಲ. ಪಕ್ಷದ ವರಿಷ್ಠರು ಅನುಮತಿ ನೀಡಿದರೆ ಯಾರು ಬೇಕಾದರೂ ಪಕ್ಷಕ್ಕೆ ಸೇರ್ಪಡೆ ಆಗಬಹುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ ಆಗುತ್ತಾರೆ ಅನ್ನೋ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ನೋಡುತ್ತಾರೆ. ಯಾರು, ಏಕೆ ಮತ್ತು ಯಾವಾಗ ಹೋಗ್ತಾರೆ ಅನ್ನೋದನ್ನ ನೋಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News