×
Ad

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಂಬಳ ಚೆಕ್‌ನಲ್ಲಿ ಕಡ್ಡಾಯ

Update: 2017-10-20 20:28 IST

ಬೆಂಗಳೂರು, ಅ.20: ಸರಕಾರದ ಅನುದಾನಕ್ಕೆ ಒಳಪಡದ ಶಿಕ್ಷಣ ಸಂಸ್ಥೆಗಳಲ್ಲೂ ಶಿಕ್ಷಕರ ಸಂಬಳವನ್ನು ಚೆಕ್‌ನಲ್ಲಿ ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸುಮಾರು 5ಲಕ್ಷ ರೂ.ದಂಡ ವಿಧಿಸಲಾಗುವುದು ಎಂದು ತಾಕೀತು ಮಾಡಿದೆ.

ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲವೆಂಬ ದೂರಿನ ಅನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೈಗೆ ತಿಂಗಳಿಗೆ 4 ಇಲ್ಲವೆ 5 ಸಾವಿರ ರೂ.ಕೊಟ್ಟು ಸತಾಯಿಸಲಾಗುತ್ತಿದೆ. ಇದರಿಂದ ಬೇಸತ್ತಿರುವ ಶಿಕ್ಷಕ ವರ್ಗ ಕೆಲಸವನ್ನು ಬಿಡಲೂ ಆಗದೆ, ಮಾಡಲೂ ಆಗದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

2005ರಲ್ಲಿಯೇ ಸೂಚನೆ ಇತ್ತು: ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಅರ್ಹತೆ ಅನುಸಾರ ಭದ್ರತೆ ಒದಗಿಸಲು 2005ರಲ್ಲಿಯೇ ಸರಕಾರ ಅಧಿಸೂಚನೆ ಹೊರಡಿಸಿತ್ತು. ಸೇವಾ ಪುಸ್ತಕಗಳನ್ನು ನಿರ್ವಹಣೆ ಮಾಡಿ, ಅವರ ವೇತನವನ್ನು ಪ್ರತಿ ತಿಂಗಳು ಚೆಕ್‌ನ ರೂಪದಲ್ಲಿ ಸೂಚಿಸಲಾಗಿತ್ತು. ಆದರೆ, ರಾಜ್ಯದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

ನಿಯಮ ಉಲ್ಲಂಘಿಸಿದರೆ ದಂಡ: ಕರ್ನಾಟಕ ಶಿಕ್ಷಣ ಕಾಯ್ದೆ 1983ನೆ ಕಲಂ 88ರಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಯ ಸಿಬ್ಬಂದಿ ನೇಮಕಾತಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಎಲ್ಲ ಸಿಬ್ಬಂದಿಗೆ ವೇತನ ಪಾವತಿ ಪಾರದರ್ಶಕವಾಗಿ ಇರಬೇಕು ಎಂದು ಕಲಂ 89ರಲ್ಲಿ ತಿಳಿಸಲಾಗಿದೆ.

ಈ ನಿಯಮವನ್ನು ಪಾಲಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ವಿಫಲವಾದರೆ 5 ಲಕ್ಷ ರೂ.ದಂಡ ವಿಧಿಸಬಹುದು. ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ಹಿಂಪಡೆಯಲು ಅವಕಾಶವಿದ್ದು, ಇದನ್ನು ಪಾಲಿಸುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News