×
Ad

ಬೆಂಗಳೂರಿನಲ್ಲಿ ಪಟಾಕಿ ಅನಾಹುತ: ವೃದ್ಧೆ ಸೇರಿ 42ಕ್ಕೂ ಹೆಚ್ಚು ಮಂದಿಗೆ ಗಾಯ

Update: 2017-10-20 21:21 IST

ಬೆಂಗಳೂರು, ಅ.20: ದೀಪಾವಳಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ 65 ವರ್ಷದ ವೃದ್ಧೆ ಸೇರಿ 42ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು, ಬಹುತೇಕ ಮಕ್ಕಳೇ ಇದ್ದಾರೆ.

ನಗರದ ನಾರಾಯಣ ನೇತ್ರಾಲಯದಲ್ಲಿ 31 ಪ್ರಕರಣಗಳು ಬೆಳಕಿಗೆ ಬಂದರೆ, ಇಲ್ಲಿನ ಬೊಮ್ಮಸಂದ್ರದಲ್ಲಿ ಮೊಮ್ಮಕ್ಕಳು ಸಿಡಿಸಿದ ಪಟಾಕಿಯಿಂದಾಗಿ ಅಜ್ಜಿ ಚೌಡಮ್ಮ(65) ಅವರ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. 42 ಪ್ರಕರಣಗಳಲ್ಲಿ ಅಧಿಕವಾಗಿ 15 ವರ್ಷದೊಳಗಿನ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಈ ಬಗ್ಗೆ ಜಾಗೃತಿ ಮೂಡಿಸಿದರು, ಗಾಯಾಳುಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಚಾಮರಾಜಪೇಟೆಯ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಸುಧಾಕರ್(12), ಕೋರಮಂಗಲದ ತಪನ್‌ಕುಮಾರ್(25) ಮತ್ತು ಕಮರ್ಷಿಯಲ್ ಸ್ಟ್ರೀಟ್‌ನ ಹುಸೈನ್ ಅಹ್ಮದ್(25) ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೋಣನಕುಂಟೆಯ ಆರು ವರ್ಷದ ಶ್ರೀಕರ ಎಂಬ ಬಾಲಕ ಪಟಾಕಿ ಸಿಡಿಸುವಾಗ ಕಣ್ಣಿಗೆ ತಾಗಿ ಕಣ್ಣು ಸುಟ್ಟುಕೊಂಡಿದೆ. ಆತನ ಪೋಷಕರು ಜಯನಗರದ ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅದೇ ರೀತಿ, ಮಾರತ್‌ಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿಯ 3 ಪ್ರಕರಣಗಳು ದಾಖಲು ಸೇರಿದಂತೆ ಒಟ್ಟು 42ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News