ಮೀಸಲು ಕ್ಷೇತ್ರದಲ್ಲೂ ಜೆಡಿಎಸ್ ಗೆಲುವು ಖಚಿತ: ದೇವೇಗೌಡ
ಬೆಂಗಳೂರು, ಅ.20: ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪ್ರಧಾನ ಕಚೇರಿಯ ಜೆಪಿ ಸಭಾಂಗಣದಲ್ಲಿ ಮೈಸೂರಿನ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಶಂಕರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ್ದೆ. ಇನ್ನೂ ದಲಿತರಿಗೆ ಸೂಕ್ತ ಮೂಲ ಸೌಕರ್ಯಗಳು ದೊರೆತಿಲ್ಲ. ಎಡಗೈ ಸಮುದಾಯ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅವರು ರಾಜಕೀಯವಾಗಿ ಬಲಗೊಳ್ಳಲು ಜೆಡಿಎಸ್ ಪಕ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಒಟ್ಟು ದಲಿತರ, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸಲಾಗುವುದೆಂದು ಹೇಳಿದರು.
ಟಿ.ನರಸೀಪುರದಲ್ಲಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದೇವೆ. 10 ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಪಟ್ಟಿಯಲ್ಲಿದ್ದಾರೆ. ಎಲ್ಲರೂ ಪಕ್ಷ ಬಲಪಡಿಸಲು ಶ್ರಮವಹಿಸಬೇಕು. ನಮ್ಮ ಪಕ್ಷದ ಸಿದ್ದಾಂತ, ರೈತರ ಪರ ಕಾಳಜಿ ಸೇರಿದಂತೆ ಇನ್ನಿತರೆ ಕಾರ್ಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಅವರ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿ ಎಂದು ಕರೆ ನೀಡಿದರು.
ಎಡಗೈಗೆ ವಂಚನೆ: ಜೆಡಿಎಸ್‌ಗೆ ಸೇರ್ಪಡೆಗೊಂಡು ಮಾತನಾಡಿದ ದಲಿತ ನಾಯಕ ಎಸ್.ಶಂಕರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ದಲಿತ ಸಮುದಾಯದ ಎಡಗೈ ಜನಾಂಗಕ್ಕೆ ವಂಚನೆ ಮಾಡಿದೆ. ರಾಜಕೀಯವಾಗಿ ಮುಂದುವರೆಯಲು ಅವಕಾಶ ನೀಡಿಲ್ಲ. ಎರಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದರೂ ನನಗೆ ಯಾವುದೇ ರಾಜಕೀಯ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಹಳೇ ಭಾಗದಲ್ಲಿ ಎಡಗೈ ಸಮುದಾಯದ ಎಲ್ಲ ಮತಗಳು ಜೆಡಿಎಸ್‌ಗೆ ದೊರೆಯಲಿದೆ. ಈ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿಯುವೆ. ಎಚ್.ಡಿ.ದೇವೇಗೌಡರು ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಮೀಸಲಾತಿ ಪರವಾಗಿ ಧ್ವನಿಗೂಡಿಸಿದ್ದಾರೆ. ಹೀಗಾಗಿಯೇ, ಜೆಡಿಎಸ್‌ಗೆ ಸೇರ್ಪಡೆಗೊಂಡೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಆಯ್ಕೆ: ಜೆಡಿಎಸ್‌ನ ವಿವಿಧ ವಿಭಾಗಗಳ ಉಸ್ತುವಾರಿ ನೋಡಿಕೊಳ್ಳುವ ಜಬಾಬ್ದಾರಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಎಂ.ಎಸ್.ನಾರಾಯಣರಾವ್ ಅವರನ್ನು ನೇಮಿಸಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.