×
Ad

ಮಧ್ಯರಾತ್ರಿ ಗುಂಡಿ ಮುಚ್ಚಿಸಿದ ಸಚಿವ ಜಾರ್ಜ್!

Update: 2017-10-20 21:44 IST

ಬೆಂಗಳೂರು, ಅ.20: ನಗರದಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಬಿದ್ದಿರುವ ಬೃಹತ್ ಪ್ರಮಾಣದ ಗುಂಡಿಗಳನ್ನು ಮಧ್ಯರಾತ್ರಿಯಲ್ಲಿ ಮೇಯರ್ ಸಂಪತ್‌ರಾಜ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವ ವಹಿಸಿಕೊಂಡು ಮುಚ್ಚಿಸಿದರು.

ಸಚಿವರು ಹಾಗೂ ಪಾಲಿಕೆಯ ಮೇಯರ್ ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 6ರವರೆಗೂ ನಗರದ ಚಾಲುಕ್ಯ ವೃತ್ತದಿಂದ ಆರಂಭಿಸಿ ಹಲವು ಸ್ಥಳಗಳಿಗೆ ಭೇಟಿ ನೀಡಿ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಹಲವು ರಸ್ತೆಗಳನ್ನು ಹೊಸದಾಗಿ ನಿರ್ಮಿಸುವಂತೆ ಸೂಚನೆ ನೀಡಿದ್ದಾರೆ.

ವಿಂಡ್ಸರ್ ಮ್ಯಾನರ್ ಸೇತುವೆ ಬಳಿಯಿದ್ದ ಗುಂಡಿಗಳನ್ನು ಖುದ್ದಾಗಿ ಪರಿಶೀಲಿಸಿ ಗುತ್ತಿಗೆದಾರರಿಂದಲೇ ಮುಚ್ಚಿಸಿದರು. ಈ ವೇಳೆ ಯಾವುದೇ ಗುಂಡಿಗಳನ್ನು ಮುಚ್ಚುವಾಗ, ಗುಂಡಿಯನ್ನು ಮತ್ತಷ್ಟು ಅಗಲ ಮಾಡಿ ಅನಂತರ ಮುಚ್ಚಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಗಂಗೇನಹಳ್ಳಿಯಲ್ಲಿ ಎಷ್ಟು ಗುಂಡಿಗಳಿವೆ ಎಂಬುದರ ಮಾಹಿತಿ ಸಂಗ್ರಹಿಸಿದ ಸಚಿವರು, ರಾತ್ರಿಯೊಳಗೆ ಎಲ್ಲ ಗುಂಡಿಗಳು ಸಂಪೂರ್ಣವಾಗಿ ಮುಚ್ಚಿರಬೇಕು. ಈ ಸಂಬಂಧ ವರದಿ ನೀಡಬೇಕು ಎಂದು ಸೂಚಿಸಿದರು.

ಬಿಇಎಲ್ ರಸ್ತೆಯಲ್ಲಿ ಪೈಥಾನ್ ಯಂತ್ರದ ನೆರವಿನಿಂದ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ಕ್ರಮವನ್ನು ಪರಿಶೀಲನೆ ನಡೆಸಿದರು. ಅನಂತರ ಹೆಬ್ಬಾಳದ ವೆುೀಲು ಸೇತುವೆಯ ಬಳಿ ಗುಂಡಿಗಳನ್ನು ಮುಚ್ಚಿಸಿದರು. ಈ ವೇಳೆ ಸಂಜಯ ನಗರಕ್ಕೆ ತೆರಳಿದ ಸಚಿವರು, ಇಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಪರಿಶೀಲಿಸಿದರು.

ನಗರದಲ್ಲಿ ಯಾವುದೇ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಯಾವುದೇ ಗುತ್ತಿಗೆದಾರರು, ಅಧಿಕಾರಿಗಳು ಉದಾಸೀನ ತೋರಿಸಬಾರದು ಎಂದು ಸೂಚಿಸಿದ ಅವರು, ನಗರದಲ್ಲಿ ಶೇ.90 ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಬಾರದಿದ್ದಲ್ಲಿ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಲಾಗುತ್ತದೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News