ಕೀಳು ಅಭಿರುಚಿಯ ಟ್ವೀಟ್ ಮಾಡಿದ ‘ಸಂಪಾದಕ’ರಿಗೆ ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ…
ಬೆಂಗಳೂರು, ಅ.20: ಇತ್ತೀಚೆಗೆ ಕನ್ನಡ ದಿನಪತ್ರಿಕೆಯೊಂದರ ಪ್ರಧಾನ ಸಂಪಾದಕರೊಬ್ಬರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ತಿರುಚಿದ ಫೋಟೊವೊಂದನ್ನು ಟ್ವೀಟ್ ಮಾಡಿರುವ ವಿಚಾರ ಭಾರೀ ವಿವಾದವನ್ನು ಸೃಷ್ಟಿಸಿತ್ತು.
ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಸಂಯೋಜಕಿಯಾದ ಹಸೀಬಾ ಅಮೀನ್ ಅವರು ನಿಂತಿದ್ದ ಫೋಟೊವೊಂದನ್ನು ಸಂಪಾದಕರು ಟ್ವೀಟ್ ಮಾಡಿದ್ದರು. ಆದರೆ ಇಷ್ಟಕ್ಕೇ ವಿವಾದ ಹುಟ್ಟಿಕೊಂಡಿಲ್ಲ. ಸಂಪಾದಕರು ಟ್ವೀಟ್ ಮಾಡಿದ್ದ ಈ ಫೋಟೊ ಅಸಲಿಯಾಗಿರಲಿಲ್ಲ. ಬದಲಿಗೆ, ತಿರುಚಿದ ಫೋಟೊ ಆಗಿತ್ತು.
ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಜೊತೆ ನಿಂತಿದ್ದ ಫೋಟೊವನ್ನು ಪೋಸ್ಟ್ ಮಾಡಿದ್ದ ಹಸೀಬಾ, “ನಾನು ಯಾರನ್ನು ಭೇಟಿಯಾದೆ ಎಂಬುದನ್ನು ಊಹಿಸಿ” ಎಂದು ಬರೆದಿದ್ದರು. ಆದರೆ ಜಬಾಬ್ದಾರಿಯುತ ಸ್ಥಾನದಲ್ಲಿರುವ ಸಂಪಾದಕರು ತಿರುಚಿದ ಚಿತ್ರವನ್ನು ಟ್ವೀಟ್ ಮಾಡಿದ್ದರು. ಸಂಪಾದಕರು ಟ್ವೀಟ್ ಮಾಡಿದ್ದ ಚಿತ್ರದಲ್ಲಿ ಶೌಚಾಲಯದ ಲೋಗೊವನ್ನು ಹಾಕಲಾಗಿತ್ತು ಹಾಗು ಹಸೀಬಾ ಬರೆದದ್ದನ್ನು ತಿರುಚಿ, “ನಾನು ಅವರನ್ನು ಎಲ್ಲಿ ಭೇಟಿಯಾಗಿದ್ದೆ ಎಂದು ಊಹಿಸಿ’ ಎಂದು ಬರೆಯಲಾಗಿತ್ತು.
ಸಂಪಾದಕರು ಈ ಟ್ವೀಟ್ ಮಾಡುತ್ತಲೇ ಟ್ವಿಟ್ಟರಿಗರಿಂದ ಭಾರೀ ಆಕ್ರೋಶವನ್ನು ಎದುರಿಸಬೇಕಾಯಿತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ‘ಸಂಪಾದಕರು’ ಈ ಬಗ್ಗೆ ಸ್ಪಷ್ಟನೆ ನೀಡುವ ಅಥವಾ ಫೊಟೊವನ್ನು ತೆಗೆದುಹಾಕುವ ‘ಜವಾಬ್ದಾರಿ’ಯನ್ನೂ ಮರೆತುಬಿಟ್ಟರು ಎಂದು ಟ್ಟಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸಮಾಜದ ಸ್ವಾಸ್ಥ್ಯವನ್ನು ರೂಪಿಸುವ ಪತ್ರಕರ್ತರು ತಾವೇ ಕೀಳು ಅಭಿರುಚಿಗೆ ಬಲಿಯಾಗಬಾರದು" ಎಂದು ಸಂಪಾದಕರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.