ನಾಳೆಯಿಂದ ವಿಶ್ವಕಪ್ ಕ್ವಾರ್ಟರ್ ಫೈನಲ್ ಹಣಾಹಣಿ

Update: 2017-10-20 18:04 GMT

ಗುವಾಹತಿ, ಅ.20: ಭಾರತದಲ್ಲಿ ನಡೆಯುತ್ತಿರುವ ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್ ಎಂಟರ ಘಟ್ಟದ ಹಣಾಹಣಿ ಶನಿವಾರ ಆರಂಭವಾಗಲಿದೆ.

ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಶ್ಚಿಮ ಆಫ್ರಿಕದ ಎರಡು ದೇಶಗಳಾದ ಮಾಲಿ ಮತ್ತು ಘಾನಾ ತಂಡಗಳು ಸೆಣಸಾಡಲಿವೆ.

 ಗುವಾಹತಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದ ಘಾನಾ ತಂಡ ಗೆಲುವಿನತ್ತ ನೋಡುತ್ತಿದೆ. 1995ರಲ್ಲಿ ಕೊನೆಯ ಬಾರಿ ಘಾನಾ ಪ್ರಶಸ್ತಿ ಜಯಿಸಿತ್ತು.

ಆಫ್ರಿಕ ದೇಶಗಳ ಅಂಡರ್ -17 ಆಫ್ರಿಕ ಕಪ್ ಟೂರ್ನಮೆಂಟ್‌ನಲ್ಲಿ ಘಾನಾವನ್ನು ಮಾಲಿ ತಂಡ 1-0 ಅಂತರದಲ್ಲಿ ಸೋಲಿಸಿತ್ತು. ಇದೀಗ ಮಾಲಿ ವಿರುದ್ಧ ಸೇಡು ತೀರಿಸಲು ಘಾನಾ ನೋಡುತ್ತಿದೆ.

  ಉಭಯ ತಂಡಗಳ ರಕ್ಷಣಾ ವ್ಯೆಹ ಬಲಿಷ್ಠವಾಗಿದೆ. ಘಾನಾ ನವಿಮುಂಬೈನಲ್ಲಿ ಬುಧವಾರ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ನೈಜರ್ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತ್ತು.

 ಘಾನಾ ತಂಡದ ಎರಿಕ್ ಆ್ಯಯಿಯ್ (45+4 ನಿ) ಮತ್ತು ರಿಚರ್ಡ್ ಡ್ಯಾನ್ಸೊ 90ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದ್ದರು.

   ಘಾನಾ ತಂಡ 1991ಮತ್ತು 1995ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. 1990ರಿಂದ ಈ ತನಕ ಐದು ಆವೃತ್ತಿಗಳ ಪೈಕಿ 4 ಆವೃತ್ತಿಗಳಲ್ಲಿ ಫೈನಲ್ ತಲುಪಿತ್ತು.

ಘಾನಾ ತಂಡ ‘ಎ’ ಗುಂಪಿನಲ್ಲಿ ಆತಿಥೇಯ ಭಾರತದ ವಿರುದ್ಧ 4-0 ಮತ್ತು ಕೊಲಂಬಿಯಾ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದೆ. ಅಮೆರಿಕ ವಿರುದ್ಧ 1-0 ಅಂತರದಲ್ಲಿ ಸೋಲು ಅನುಭವಿಸಿದೆ. ಎರಡು ಗೆಲುವಿನೊಂದಿಗೆ ಘಾನಾ ಪ್ರಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದೆ.

 ಮಾಲಿ ತಂಡ ಆತ್ಮ ವಿಶ್ವಾಸದಲ್ಲಿ ಬೀಗುತ್ತಿದೆ.ಗ್ರೂಪ್ ‘ಬಿ’ನಲ್ಲಿ ಮಾಲಿ ತಂಡ ಪರಾಗ್ವೆ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಟರ್ಕಿ ವಿರುದ್ಧ 3-0 ಮತ್ತು ನ್ಯೂಝಿಲೆಂಡ್ ವಿರುದ್ಧ 3-1 ಗೆಲುವಿನೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ತಲುಪಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಮಾಲಿ ತಂಡ ಇರಾಕ್ ವಿರುದ್ಧ 5-1 ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೇರಿದೆ. ಮಾಲಿ ತಂಡದ ಲ್ಯಾಸ್ಸಾನ ಎನ್’ ಡೈಯೆ 4 ಪಂದ್ಯಗಳಲ್ಲಿ 5 ಗೋಲು ದಾಖಲಿಸಿ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಲು ನೆರವಾಗಿದ್ದಾರೆ.

►ಮಾಲಿ - ಘಾನಾ

ಸ್ಥಳ: ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಗುವಾಹತಿ

ಸಮಯ: ಸಂಜೆ 5:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News