ಸಚಿವ ರಮೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಅ.21:ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕ್ಷೌರಿಕ ಸಮುದಾಯದವನ್ನು ಅಮಾನವೀಯವಾಗಿ ಜೇಬುಗಳ್ಳರಿಗೆ ಹೋಲಿಕೆ ಮಾಡುವ ಮೂಲಕ ಟೀಕೆ ಮಾಡಿರುವ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ತ್ಯಾಗರಾಜು, ಕ್ಷೌರಿಕ ವೃತ್ತಿ ಕಳ್ಳತನವಲ್ಲ. ಅದೊಂದು ವಂಶ ಪಾರಂಪಾರಿಕವಾಗಿ ಮಾಡಿಕೊಂಡು ಬಂದಿರುವ ಕುಲ ವೃತ್ತಿಯಾಗಿದೆ. ಈ ಕುರಿತು ಕನಿಷ್ಠ ಪ್ರಜ್ಞೆಯಿಲ್ಲದೆ ಅತ್ಯಂತ ಕೀಳಾಗಿ ಸಚಿವರು ನಮ್ಮ ಸಮುದಾಯವನ್ನು ಟೀಕಿಸಿದ್ದಾರೆ. ಇದು ಇಡೀ ಸವಿತಾ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಇದರಿಂದ ನಮ್ಮ ಸಮುದಾಯದವರಿಗೆ ಬಳಹ ನೋವಾಗಿದೆ ಎಂದು ಹೇಳಿದರು.
ಇನ್ನೊಬ್ಬರನ್ನು ಟೀಕಿಸುವ ಬರದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟುಕೊಂಡು ಕುಲವೃತ್ತಿಯನ್ನು ನಿರ್ವಹಿಸುತ್ತಾ, ಕಾಯಕವೇ ಕೈಲಾಸ ಎಂದು ನಂಬಿಕೊಂಡು ಜೀವನ ನಡೆಸುತ್ತಿರುವವರು ನಮ್ಮ ಸಮುದಾಯದವರು. ಯಾವುದೇ ಮೋಸ, ವಂಚನೆಯಿಲ್ಲದೆ ನ್ಯಾಯಯುತವಾಗಿ ದುಡಿದು ತಿನ್ನುತ್ತಿದ್ದಾರೆ. ಅಂತ ಕ್ಷೌರಿಕ ವೃತ್ತಿ ಮಾಡುವ ನಮ್ಮನ್ನು ಕೀಳು ದರ್ಜೆಯಲ್ಲಿ ಹೋಲಿಕೆ ಮಾಡಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ, ಕೂಡಲೇ ಸಚಿವರು ಕ್ಷಮಾಪಣೆ ಕೋರಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜವಾದಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಚಿವ ಸಂಪುಟದಲ್ಲಿ ಇಂತಹ ಕೀಳು ಮನಸ್ಥಿತಿಯುಳ್ಳ ಸಚಿವರು ಅಡಗಿರುವುದು ಅವರ ಆಡಳಿತಕ್ಕೆ ಕಪ್ಪುಚುಕ್ಕೆ. ಹೀಗಾಗಿ, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.