ಕಾರುಗಳ ಗಾಜು ಒಡೆದ ಆರೋಪ: ಐವರ ಬಂಧನ
ಬೆಂಗಳೂರು, ಅ.21: ನಗರದ ಮುನೇಶ್ವರ ಮತ್ತು ನಾಗೇಂದ್ರ ಬ್ಲಾಕ್‌ನಲ್ಲಿ ರಸ್ತೆಗಳ ಬದಿಯಲ್ಲಿದ್ದ ಕಾರುಗಳ ಗಾಜುಗಳನ್ನು ಒಡೆದಿದ್ದ ಆರೋಪದ ಮೇಲೆ ಐವರನ್ನು ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಎಸ್.ಬಿ.ಎಂ. ಕಾಲನಿಯ ಮಧುಸೂದನ್(20), ತ್ಯಾಗರಾಜನಗರದ ಧನುಷ್(20), ನಾಗೇಂದ್ರ ಬ್ಲಾಕ್‌ನ ಸುದರ್ಶನ್(20) ಕೆಂಪೇಗೌಡನಗರದ ರಾಹುಲ್(19) ಶ್ರೀನಿವಾಸನಗರದ ರಕ್ಷಿತ್(19) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ರಾತ್ರಿ ಮದ್ಯಪಾನ ಮಾಡಿ ಹೊರಗೆ ಬಂದ ಆರೋಪಿಗಳು ರಸ್ತೆಗಳ ಬದಿಯಲ್ಲಿದ್ದ ಐದು ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದರು. ಈ ಬಗ್ಗೆ ಪ್ರಶ್ನಿಸಿದ ಸ್ಥಳೀಯರಿಗೆ ಬೆದರಿಕೆ ಹಾಕಿದ್ದರು. ಜನ ಸೇರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎಂದು ಗಿರಿನಗರ ಪೊಲೀಸರು ತಿಳಿಸಿದ್ದಾರೆ.
ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಂಧಿತರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.