×
Ad

ಶಿವಕುಮಾರ್-ಸಿದ್ದರಾಮಯ್ಯ ಅಕ್ರಮದಲ್ಲಿ ಭಾಗಿ: ಯಡಿಯೂರಪ್ಪ ಆರೋಪ

Update: 2017-10-21 18:46 IST

ಬೆಂಗಳೂರು, ಅ.21: ಕಲ್ಲಿದ್ದಲು ಗುತ್ತಿಗೆ ರದ್ದು ಕುರಿತಂತೆ ಖಾಸಗಿ ಸಂಸ್ಥೆ ಪಾವತಿಸಬೇಕಿದ್ದ ಸುಮಾರು 418 ಕೋಟಿ ರೂ.ದಂಡ ಸೇರಿ ಒಟ್ಟು 430 ಕೋ. ರೂ. ಹಣವನ್ನು ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಒಳಒಪ್ಪಂದ ಮಾಡಿಕೊಂಡು ಅಕ್ರಮವಾಗಿ ಪಾವತಿಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅಕ್ರಮವಾಗಿ ದಂಡ ಪಾವತಿಸಿರುವ ಕುರಿತು ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತನ್ನ ರಾಜಕೀಯ ಜೀವನದಲ್ಲಿ ಕಂಡರಿಯದ ಬಹಿರಂಗವಾಗಿ ನಡೆದಿರುವ ದೊಡ್ಡ ಹಗರಣ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಖಜಾನೆಯನ್ನು ಹಗಲು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಹೊರತೆಗೆದಿದ್ದಕ್ಕೆ ಕೊಲ್ಕತ್ತ ಮೂಲದ ಖಾಸಗಿ ಸಂಸ್ಥೆಯಾದ ಇಎಂಟಿಎ ಹಾಗೂ ಕೆಪಿಸಿಎಲ್ ಸಹಭಾಗಿತ್ವದ ಕೆಇಎಂಸಿಎಲ್ ಸಂಸ್ಥೆಗೆ 2014ರಲ್ಲಿ ಸುಪ್ರೀಂ ಕೋರ್ಟ್ ದಂಡ ವಿಧಿಸಿತ್ತು. ಕಲ್ಲಿದ್ದಲು ಹಂಚಿಕೆಯನ್ನು ರದ್ದುಗೊಳಿಸಿದ್ದಲ್ಲದೆ, ಹೊರತೆಗೆದ ಕಲ್ಲಿದ್ದಲಿಗೆ ಪ್ರತೀ ಮೆಟ್ರಿಕ್‌ಟನ್‌ಗೆ 295 ರೂ. ದಂಡ ವಿಧಿಸಲಾಗಿತ್ತು. ದಂಡದಲ್ಲಿ ಶೇ.74ರಷ್ಟು ಮೊತ್ತವನ್ನು ಖಾಸಗಿ ಸಂಸ್ಥೆ ಇಎಂಟಿಎ ಸಂಸ್ಥೆಯೇ ಪಾವತಿಸಬೇಕು ಎಂದು ಕೋರ್ಟ್ ತೀರ್ಪು ನೀಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾಗಿರುವ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿರ್ದೇಶಕರಾಗಿರುವ ಕೆಪಿಸಿಎಲ್ ಸಂಸ್ಥೆ ಭರಿಸಬೇಕಿದ್ದ ಶೇ. 26ರಷ್ಟು ಬದಲಾಗಿ ಸಂಪೂರ್ಣ ದಂಡವನ್ನು ಭರಿಸಿ ಅಕ್ರಮ ಎಸಗಿದ್ದಾರೆ ಎಂದು ದೂರಿದರು.

2014 ಡಿಸೆಂಬರ್ 30ರಂದು ಇಎಂಟಿಎ ಸಂಸ್ಥೆಗೆ ಮುಖ್ಯಮಂತ್ರಿ ಸ್ವತಃ ಪತ್ರ ಬರೆದು ನೀವೆ ಭರಿಸಿ ಎಂದು ಸೂಚಿಸಿದ್ದರು. ಅದಾದ ಒಂದೇ ದಿನದಲ್ಲಿ ತಾನೂ ಕೂಡ ಪಾಲುದಾರಿಕೆ ಹೊಂದಿದ ಕಾರಣ 110 ಕೋಟಿ ರೂ. ಹಣ ನೀಡುವ ನಿರ್ಧಾರ ಪ್ರಕಟಿಸಿತು. ನಂತರ ದಂಡದ ಪೂರ್ಣ ಮೊತ್ತವನ್ನು ಪಾವತಿಸಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಿಕ್‌ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಸಿಬಿಐ ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ: ದಂಡ ಪಾವತಿ ವಿಚಾರದಲ್ಲಿ ನಡೆದಿರುವ ಕೋಟ್ಯಂತರ ಹಗರಣ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆದು ಹಗರಣ ದಾಖಲೆಗಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

ಉತ್ತರಿಸಲಿ: ದಂಡ ಪಾವತಿ ವಿಚಾರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಜನರು ಛೀಮಾರಿ ಹಾಕಲಿದ್ದಾರೆ. ಹನ್ನೊಂದು ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿರುವ ಮೇದಾವಿ ಸಿದ್ದರಾಮಯ್ಯ ಈಗ ಜನರಿಗೆ ಉತ್ತರಿಸಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸಂಸದರಾದ ಪಿ.ಸಿ. ಮೋಹನ್, ಜಿ.ಎಂ.ಸಿದ್ದೇಶ್ವರ್, ಶಾಸಕರಾದ ವಿಶ್ವನಾಥ್, ಅಶ್ವತ್ಥ್ ನಾರಾಯಣ, ಎಸ್ಸಿ ಮೋರ್ಚಾದ ಅಧ್ಯಕ್ಷ ಡಿ.ಎಸ್.ವೀರಯ್ಯ ಸೇರಿದಂತೆ ಇತರರು ಇದ್ದರು.

'ಯಾವುದೇ ತನಿಖೆಗೂ ಸಿದ್ಧ'
ಕೇಂದ್ರ ಸರಕಾರ ರೂಪಿಸಿದ ನೀತಿಗಳಿಗೆ ಅನುಗುಣವಾಗಿಯೇ ಕಲ್ಲಿದ್ದಲು ಹರಾಜು ಮಾಡಿದ್ದೇವೆ. ವಾಜಪೇಯಿ ಸರಕಾರ ಕೋಲ್ ಬ್ಲಾಕ್ ನಿಗದಿ ಮಾಡಿತ್ತು. ಅದರ ಅನುಗುಣವಾಗಿಯೇ ಗಣಿ ಹಂಚಿಕೆ ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಲಂಚ ಪಡೆದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಯಾವುದೇ ತನಿಖೆಗೂ ನಾನು ಸಿದ್ಧ.

-ಡಿ.ಕೆ. ಶಿವಕುಮಾರ್, ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News