ಯಾವುದೇ ತನಿಖೆ-ಬಹಿರಂಗ ಚರ್ಚೆಗೂ ಸಿದ್ಧ
ಬೆಂಗಳೂರು, ಅ. 21: ಕಲ್ಲಿದ್ದಲು ಗುತ್ತಿಗೆಯ ದಂಡ ಪಾವತಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆಗ್ರಹಿಸಿ ಪತ್ರ ಬರೆದರೆ ಸ್ವಾಗತ. ಈ ಸಂಬಂಧ ಯಾವುದೇ ತನಿಖೆ ಮತ್ತು ಬಹಿರಂಗ ಚರ್ಚೆಗೂ ತಾನು ಸಿದ್ಧ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಳ ಒಪ್ಪಂದ ಮಾಡಿಕೊಳ್ಳುವ ಅನುಭವ ಯಡಿಯೂರಪ್ಪ ಮತ್ತು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ನಮಗೆ ಆ ಅಭ್ಯಾಸವಿಲ್ಲ. ಕೇಂದ್ರ ಸರಕಾರದ ನೀತಿ- ನಿಯಮಗಳ ಅನುಸಾರವಾಗಿಯೇ ಒಪ್ಪಂದಗಳಾಗಿದ್ದವು ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಇಂಥ ಬೇಜವಾಬ್ದಾರಿ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ಕಲ್ಲಿದ್ದಲು ಬ್ಲಾಕ್ ರದ್ದಾಯಿತು. ನಮ್ಮ ಎಲ್ಲ ಸಂಸತ್ ಸದಸ್ಯರು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಕೋರಿದ್ದೇವೆ. ಆದರೆ, ಹಂಚಿಕೆಗೆ ಅರ್ಹತೆ ಸಿಗಬೇಕೆಂಬ ಉದ್ದೇಶದಿಂದ ಕೆಇಸಿಎಂಎಲ್‌ಗೆ ಹಣ ಪಾವತಿ ಮಾಡಿದ್ದೆವು ಎಂದರು.
ಪ್ರತೀ ವರ್ಷ ನಾವು ಜಾಸ್ತಿ ಹಣ ನೀಡಿ ಕೇಂದ್ರ ಸರಕಾರ ಕಂಪೆನಿಗಳಿಂದ ಕಲ್ಲಿದ್ದಲು ಖರೀದಿ ಮಾಡುತ್ತಿದ್ದೇವೆ. ಇದರಿಂದ ಕೋಟ್ಯಂತರ ರೂ. ಸರಕಾರಕ್ಕೆ ನಷ್ಟ ಆಗುತ್ತಿದೆ. ಹೀಗಾಗಿ ರಾಜ್ಯದ ಹಿತ ಕಾಪಾಡಲು, ನಷ್ಟ ಭರಿಸಲು ಕಂಪೆನಿಗೆ ಹಣ ಪಾವತಿ ಮಾಡಿದ್ದೇವೆ. ಇದು ಕೇಂದ್ರ ಸರಕಾರಕ್ಕೂ ಗೊತ್ತಿದೆ ಎಂದು ಹೇಳಿದರು.
ಬಿಎಸ್‌ವೈ ಅವರಿಗೆ ಸತ್ಯ ಏನೆಂದು ಗೊತ್ತಿಲ್ಲ. ಹೀಗಾಗಿ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಲ್ಲಿ ಯಾವುದೇ ವೈಯಕ್ತಿಕ ತೀರ್ಮಾನ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅಥವಾ ನನಗಾಗಲಿ ಯಾವುದೇ ದುರುದ್ದೇಶವಿಲ್ಲ ಎಂದ ಅವರು, ಬಿಎಸ್‌ವೈ ಇಂತಹ ಆರೋಪಗಳನ್ನು ಮಾಡಿ ನಗೆಪಾಟಲಿಗೆ ಈಡಾಗುತ್ತಿರುವುದನ್ನು ನೋಡಿ ನನಗೆ ವ್ಯಥೆಯಾಗುತ್ತಿದೆ ಎಂದು ಲೇವಡಿ ಮಾಡಿದರು.