ಅ.23 ರಂದು ರಾಜ್ಯ ಸರಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ
ಬೆಂಗಳೂರು, ಅ.21: ಸರಕಾರದ ವತಿಯಿಂದ ಇದೇ ಮೊದಲ ಭಾರಿಗೆ ರಾಜ್ಯಮಟ್ಟದಲ್ಲಿ ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಅ.23 ರಂದು ವಿಧಾನ ಸೌಧದ ಮುಂಭಾಗ ಆಚರಿಸಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಮಹಾಸ್ವಾಮಿ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ 25 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇರುವುದರಿಂದ ವಿಧಾನಸೌಧದ ಮುಂಭಾಗ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲಾಗಿತ್ತು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 9.30ಕ್ಕೆ ಪುರಭವನ ಮುಂಭಾಗ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸಚಿವೆ ಉಮಾಶ್ರೀ ಮಾಲಾರ್ಪಾಣೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ ಮೂರು ಗಂಟೆಗೆ ಚೆನ್ನಮ್ಮ ಅವರ ಸ್ತಬ್ಧ ಚಿತ್ರದೊಂದಿಗೆ 10 ಜಾನಪದ ಕಲಾ ತಂಡಗಳು ಸ್ವಾತಂತ್ರ ಉದ್ಯಾನದಿಂದ ವಿಧಾನಸೌಧದವರೆಗೂ ಮೆರವಣಿಗೆ ಹೊರಡಲಿದೆ ಎಂದರು.
ಅಂದು ಸಂಜೆ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿ ಸಾನಿದ್ಯ ವಹಿಸಲಿದ್ದಾರೆ. ಈ ವೇಳೆ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನಸಭೆಯ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್, ಸಚಿವರಾದ ಆರ್.ರೋಷನ್ ಬೇಗ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ, ವಿನಯ್ ಕುಲಕರ್ಣಿ, ಎಸ್.ಎಸ್.ಮಲ್ಲಿಕಾರ್ಜುನ, ಈಶ್ವರ್ ಖಂಡ್ರೆ, ಪರಿಷತ್ತಿನ ಸದಸ್ಯ ಬಸವರಾಜ ರಾಯರೆಡ್ಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಖಡ್ಗ ವಾಪಸ್ ತರಲು ಆಗ್ರಹ: ಲಂಡನ್‌ನ ದಿ ಪ್ರೈಸ್ ಆಫ್ ಕಿತ್ತೂರು ಸಂಗ್ರಹಾಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಖಡ್ಗವನ್ನು ರಾಜ್ಯಕ್ಕೆ ಮರಳಿ ವಾಪಸ್ ತರಬೇಕು. ಈ ಕುರಿತು ಕೂಡಲೇ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ಮುಂದಿನ ಒಂದು ವರ್ಷ ಅವಧಿಯೊಳಗೆ ಅಭಿವೃದ್ಧಿಪಡಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಇರುವ ವೃತ್ತಕ್ಕೆ ಹಿಂದೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಎಂದು ಹೆಸರಿತ್ತು. ಬಳಿದ ಈ ವೃತ್ತಕ್ಕೆ ಹಡ್ಸನ್ ವೃತ್ತ ಎಂದು ಹೆಸರಿಡಲಾಗಿದೆ. ಚೆನ್ನಮ್ಮ ಅವರ ಜಯಂತಿ ಅಂಗವಾಗಿ ಬಿಬಿಎಂಪಿ ಈ ವೃತ್ತಕ್ಕೆ ಮರಳಿ ಚೆನ್ನಮ್ಮಳ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಶಾಲಿ ಲಿಂಗಾಯತ ಸಮುದಾಯದ ಮುಖಂಡ ಡಾ.ಬಿ.ಎಸ್.ಪಾಟೀಲ್ ಸೇರಿದಂತೆ ಇತರರು ಇದ್ದರು.