×
Ad

ಯಡಿಯೂರಪ್ಪರಿಗೆ ಸುಳ್ಳು ಆರೋಪಗಳು ಶೋಭೆ ತರುವುದಿಲ್ಲ: ದಿನೇಶ್ ಗುಂಡೂರಾವ್

Update: 2017-10-21 19:59 IST

ಬೆಂಗಳೂರು, ಅ.21: ಕಲ್ಲಿದ್ದಲು ಹಂಚಿಕೆಯ ಸಂಬಂಧ ದಂಡ ಪಾವತಿಸಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸುಳ್ಳು ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾಗಿ ಅವರಿಗೆ ಈ ರೀತಿಯ ಸುಳ್ಳು ಆರೋಪಗಳು ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಕಿಡಿ ಕಾರಿದ್ದಾರೆ.

ಶನಿವಾರ ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಹಗರಣದ ಸಂಬಂಧ ದಂಡ ಪಾವತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸುಖಾಸುಮ್ಮನೆ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ನ್ಯಾಯಾಲಯದಿಂದ ತೀರ್ಪು ಹೊರ ಬರುವ ಮುನ್ನ ಯಡಿಯೂರಪ್ಪ ಈ ರೀತಿ ಆರೋಪದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಮಾಡಿರುವ ಆರೋಪಗಳು ಎಲ್ಲವೂ ಸುಳ್ಳು. ಯಾರೋ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಆಸ್ಪತ್ರೆಯಿಂದ ಬಂದ ಮೇಲೆ ಹೊಸದೊಂದು ಅಧ್ಯಾಯ ಇಟ್ಟಿದ್ದಾರೆ. ಕಾಂಗ್ರೆಸ್ ಮುಖಂಡರ ಮೇಲೆ ಮಾಡಿರುವ ಆರೋಪಗಳ ಸಾಲಿನಲ್ಲಿ ಮತ್ತೊಂದು ಸುಳ್ಳು ಆರೋಪ ಮಾಡಿದ್ದಾರೆ. ಯಾವುದೇ ಅವ್ಯವಹಾರವನ್ನು ಯಾವ ಮಂತ್ರಿಗಳು ಕೂಡ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಎಲ್‌ನ ಬೆಳವಣಿಗೆಯನ್ನು ಬಿಜೆಪಿಯವರು ಸಹಿಸುತ್ತಿಲ್ಲ. ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಕಾಯಬೇಕು. ಅದು ಬಿಟ್ಟು ಸುಳ್ಳು ಆರೋಪ ಮಾಡುವ ಮೂಲಕ ನ್ಯಾಯಾಧೀಶರ ಮೇಲೆ ಒತ್ತಡ ತರುವಂಥ ಕೆಲಸ ಬಿಜೆಪಿ ಮಾಡುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಟಿಪ್ಪು ಕಂಡರೆ ಬಿಜೆಪಿಯವರಿಗೆ ಆಗಲ್ಲ: ಬಿಜೆಪಿಯವರಿಗೆ ಟಿಪ್ಪುಸುಲ್ತಾನ್ ಅಂದರೆ ಆಗುವುದಿಲ್ಲ. ಹಾಗಾಗಿ ಈ ರೀತಿ ಟಿಪ್ಪು ಜಯಂತಿ ಆಮಂತ್ರಣದಲ್ಲಿ ನಮ್ಮ ಹೆಸರು ಹಾಕಬೇಡಿ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆಹ್ವಾನ ಕೊಡುವುದು ನಮ್ಮ ಜವಾಬ್ದಾರಿ. ಬಂದರೆ ಸಂತೋಷ, ಬರದಿದ್ದರೆ ಬೇಸರವಿಲ್ಲ ಎಂದು  ಹೇಳಿದರು.

ಮುಂದೆ ಒಂದು ದಿನ ಬಿಜೆಪಿಯವರು ತಾಜ್‌ಮಹಲ್, ಕೆಂಪುಕೋಟೆ ಒಡೆಯಿರಿ ಎಂದರೆ ಕೇಳಲು ಆಗುವುದಿಲ್ಲ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ವಿಫಲವಾಗಿವೆ. ಹೀಗಾಗಿ ಜನರನ್ನು ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆಗಳನ್ನು ಬಿಜೆಪಿಯವರು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News