×
Ad

ವಜ್ರ ಮಹೋತ್ಸವ ಸಮಾರಂಭ: ಶಕ್ತಿ ಕೇಂದ್ರ ವಿಧಾನ ಸೌಧದಲ್ಲಿ ಭರದ ಸಿದ್ಧತೆ

Update: 2017-10-21 20:04 IST

ಬೆಂಗಳೂರು, ಅ. 21: ಭಾರೀ ವಿವಾದ ಸೃಷ್ಟಿಸಿದ್ದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಕಟ್ಟಡದ ‘ವಜ್ರ ಮಹೋತ್ಸವ’ ಅ.25ಕ್ಕೆ ಜರಗಲಿದ್ದು, ವಿಧಾನ ಮಂಡಲ ಜಂಟಿ ಅಧಿವೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ.

ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಸಿಬ್ಬಂದಿ ವಿಧಾನಸೌಧದ ಮೊಗಸಾಲೆ ಸ್ವಚ್ಛತೆ, ಶಾಮಿಯಾನ ನಿರ್ಮಾಣ ಸೇರಿದಂತೆ ಅಗತ್ಯ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಧ್ಯೆಯೇ ಅತ್ಯಂತ ಸರಳ ರೀತಿಯಲ್ಲಿ ಸಮಾರಂಭದ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ.

ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ, ಸಭಾಪತಿ ಹಾಗೂ ಸ್ಪೀಕರ್ ಭಾವಚಿತ್ರಗಳಿವೆ. ರಾಷ್ಟ್ರಪತಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ. ಸಭಾಪತಿ ಶಂಕರಮೂರ್ತಿ, ಸ್ಪೀಕರ್ ಕೋಳಿವಾಡ್ ಹೆಸರನ್ನಷ್ಟೇ ಪ್ರಕಟಿಸಲಾಗಿದೆ.

ಅ.25ರ ಬೆಳಗ್ಗೆ 11ಕ್ಕೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದು, ಮಧ್ಯಾಹ್ನ 12:30ಕ್ಕೆ ರಾಷ್ಟ್ರಪತಿ ಅವರು ವಿಧಾನ ಪರಿಷತ್ ಸಭಾಂಗಣ ವೀಕ್ಷಣೆ ಮಾಡಲಿದ್ದಾರೆ. ಆ ಬಳಿಕ ಗಾಂಧಿ ಪುತ್ಥಳಿ ಮುಂದೆ ಉಭಯ ಸದನಗಳ ಶಾಸಕರ ‘ಫೋಟೊ ಶೂಟ್’ ನಡೆಯಲಿದೆ.

ಮಧ್ಯಾಹ್ನ 1:30ಕ್ಕೆ ಬ್ಯಾಂಕ್ವೆಟ್‌ಗೆ ಹೊಂದಿಕೊಂಡಿರುವ ಹುಲ್ಲುಹಾಸಿನ ಮೇಲೆ ಭೋಜನ, ಮಧ್ಯಾಹ್ನ 3ರಿಂದ 5ಗಂಟೆಯ ವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ವಿಧಾನಸೌಧ ಕಟ್ಟಡ ನಿರ್ಮಾಣ‘, ಟಿ.ಎನ್.ಸೀತಾರಾಮ್ ನಿರ್ದೇಶನದ ‘ಕರ್ನಾಟಕ ವಿಧಾನ ಮಂಡಲ ಶಾಸನಸಭೆ ನಡೆದುಬಂದ ಹಾದಿ’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ವಿಧಾನಸೌಧ ಕಟ್ಟಡದ 3-ಡಿ ವೀಡಿಯೊ ಪ್ರದರ್ಶನ ನಡೆಯಲಿದೆ.

ಸಂಜೆ 5ರಿಂದ 6ಗಂಟೆಯ ವರೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6 ರಿಂದ 6:30ರ ವರೆಗೆ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ರಾಜ್ಯದ ಪ್ರಥಮ ಸಿಎಂ ಕೆ.ಸಿ.ರೆಡ್ಡಿ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಹಾಗೂ ಮಾಜಿ ಸಿಎಂ ಕಡಿದಾಳ್ ಮಂಜಪ್ಪ ಕುಟುಂಬದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು.
ಸಂಜೆ 6:30ರಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ದೇಶಕ ಹಂಸಲೇಖ ಹಾಗೂ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ, ಸಮಾನಾಂತರವಾಗಿ ವಿಧಾನಸೌಧದ ಕಟ್ಟಡದ ಮೇಲೆ ‘3ಡಿ’ ಮ್ಯಾಪಿಂಗ್ ಮೂಲಕ ರಾಜ್ಯ ಸರಕಾರದ ಜನರ ಯೋಜನೆಗಳ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ದುಂದು ವೆಚ್ಚ ಕಡಿತ: ವಿಧಾನಸೌಧ ಕಟ್ಟಡಕ್ಕೆ 60 ವರ್ಷ ತುಂಬಿದ ಸಂದರ್ಭದಲ್ಲಿ ವಜ್ರ ಮಹೋತ್ಸವ ಆಚರಣೆ ಮಾಡುತ್ತಿದ್ದು, ಸಮಾರಂಭಕ್ಕೆ 26.87 ಕೋಟಿ ರೂ.ವೆಚ್ಚಕ್ಕೆ ನಿರ್ಧರಿಸಲಾಗಿತ್ತು. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮೊತ್ತವನ್ನು ಇದೀಗ 10 ಕೋಟಿ ರೂ.ಗೆ ಎರಡು ದಿನದ ಕಾರ್ಯಕ್ರಮವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News