×
Ad

35 ಕೋಟಿ ಮುಸ್ಲಿಮರನ್ನು ಓಡಿಸೋಕೆ ಸಾಧ್ಯವೇ?

Update: 2017-10-21 20:27 IST

ಬೆಂಗಳೂರು, ಅ. 21: ಕೇಂದ್ರ ಸಚಿವರಾಗಿ ಅನಂತ ಕುಮಾರ್ ಹೆಗಡೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಈಗಲೂ ಅದೇ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ದೇಶದಲ್ಲಿನ ಮೂವತ್ತೈದು ಕೋಟಿ ಮುಸ್ಲಿಮರನ್ನು ಓಡಿಸೋಕೆ ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ಬೆಂಗಳೂರು ಹೊರ ವಲಯದ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಬೇಡಿ ಎಂದು ಅನಂತ ಕುಮಾರ್ ಹೆಗಡೆ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಟೀಕಿಸಿದರು.

‘ಇದರಲ್ಲಿ ರಾಜಕೀಯ ಲಾಭ ಪಡೆಯುವುದೇನಿಲ್ಲ, ನಾನು ಸಂಸದನಾಗಿ ಆಯ್ಕೆಯಾಗಿದ್ದೆ ಅಲ್ಪಸಂಖ್ಯಾತರನ್ನು ವಿರೋಧಿಸಿ’ ಎಂದು ಕೇಂದ್ರ ಸಚಿವರಾಗಿ ಹೆಗಡೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಂತಹ ಧೋರಣೆ ಅನುಸರಣೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಗೆಲುವೇ ಮಾನದಂಡ: ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ತಾಕೀತು ಮಾಡಿದ ಅವರು, ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲೇಬೇಕು. ಈ ಬಾರಿ ಗೆಲುವೆ ಮಾನದಂಡ ಎಂದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಜೆಡಿಎಸ್ ಸರಕಾರ ಆಡಳಿತಕ್ಕೆ ಬರಬೇಕಿದೆ. ಆದುದರಿಂದ ಯುವಕರು ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು ಎಂದ ಅವರು, ಜಿಲ್ಲಾ ಮತ್ತು ತಾಲೂಕು, ಯುವ ಘಟಕದಲ್ಲಿ ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂತವರನ್ನು ತಕ್ಷಣ ಬದಲಾವಣೆ ಮಾಡಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಶಾಸಕ ಮಧು ಬಂಗಾರಪ್ಪ ಅವರಿಗೆ ಸೂಚನೆ ನೀಡಿದರು.

ಅನಿತಾ ಕುಮಾರಸ್ವಾಮಿ ಒಂದು ಬಾರಿ ಶಾಸಕರಾಗಿದ್ದರು. ಚನ್ನಪಟ್ಟಣದಿಂದ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದಾರೆ. ಸ್ಥಳೀಯ ಮುಖಂಡರು ಅವರ ಮೇಲೆ ಈ ಬಾರಿ ಸ್ಪರ್ಧಿಸಲು ಒತ್ತಡ ಹೇರುತ್ತಿರಬಹುದು. ಈ ಬಾರಿ ಟಿಕೆಟ್ ಹಂಚಿಕೆಯನ್ನ ಅಪ್ಪ-ಮಕ್ಕಳು ನಿರ್ಧಾರ ಮಾಡವುದಿಲ್ಲ. ಬದಲಿಗೆ ಟಿಕೆಟ್ ಹಂಚಿಕೆ ಸಮಿತಿ ರಚನೆ ಮಾಡಿದ್ದು, ಬಸವರಾಜ ಹೊರಟ್ಟಿ, ಎಚ್.ವಿಶ್ವನಾಥ್, ಎಚ್.ಸಿ.ನೀರಾವರಿ ಸೇರಿ ಇನ್ನಿತರ ಮುಖಂಡರಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News