ಕಾಂಗ್ರೆಸಿಗರ ಮನೆಯಲ್ಲಿ ಟಿಪ್ಪು ಜಯಂತಿ ಆಚರಿಸಲಿ: ಶೋಭಾ ಕರಂದ್ಲಾಜೆ
ಬೆಂಗಳೂರು, ಅ.21: ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಟಿಪ್ಪು ಜಯಂತಿ ಆಚರಿಸಬಾರದು. ಬೇಕಿದ್ದರೆ ಕಾಂಗ್ರೆಸಿಗರ ಹಣದಲ್ಲಿ ಅವರ ಪಕ್ಷದ ಕಚೇರಿಗಳಲ್ಲಿ, ಅವರ ಮನೆಗಳಲ್ಲಿ ಜಯಂತಿ ಆಚರಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪುಜಯಂತಿ ಆಚರಣೆಯಿಂದ ರಾಜ್ಯದಲ್ಲಿ ಕೋಮು ಸಾಮರಸ್ಯ ಕೆಡುತ್ತದೆ. ಹಾಗಾಗಿ ಟಿಪ್ಪುಜಯಂತಿ ಆಚರಣೆ ಬೇಡ ಎಂದು ಆಗ್ರಹಿಸಿದರು.
ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಆಚರಣೆ ಇಲ್ಲ. ಜಯಂತಿ ಬೇಡಿಕೆಯನ್ನೂ ಅವರು ಸಲ್ಲಿಸಿಲ್ಲ, ಆದರೂ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಮತ ಬ್ಯಾಂಕ್ ರಾಜಕಾರಣಕ್ಕೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರಿಗೂ ಬೇಡವಾಗಿರುವ ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕಿಸಬೇಡಿ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ. ಜಯಂತಿಯಲ್ಲಿ ನಾವು ಯಾರು ಪಾಲ್ಗೊಳ್ಳುವುದಿಲ್ಲ. ನಮ್ಮ ವಿರೋಧ ಲೆಕ್ಕಿಸದೇ ಆಚರಣೆ ಮಾಡಿದರೆ ಅಂದು ನಾವು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.