ಗಾಂಧಿ ತತ್ವ ಅನುಸರಿಸುವವರೆಲ್ಲರೂ ನಮ್ಮ ಬಂಧುಗಳು: ಗಾಂಧಿ ಮೊಮ್ಮಗಳು ಸುಮಿತ್ರಾ ಗಾಂಧಿ
ಬೆಂಗಳೂರು, ಅ.21: ಸತ್ಯ, ಅಹಿಂಸೆ ಸೇರಿದಂತೆ ರಾಷ್ಟ್ರಪಿತ ಮಹಾತ್ಮಗಾಂಧಿಯ ತತ್ವಗಳನ್ನು ಅನುಸರಿಸುವ ಎಲ್ಲರೂ ನಮ್ಮ ಬಂಧುಗಳಾಗುತ್ತಾರೆ ಎಂದು ಮಹಾತ್ಮಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅಭಿಪ್ರಾಯಿಸಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕಸಾಪದಲ್ಲಿ ಆಯೋಜಿಸಿದ್ದ ಗಾಂಧಿ ಪುದುವಟ್ಟು ಪ್ರಶಸ್ತಿ ಹಾಗೂ ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿ ಇಡೀ ದೇಶಕ್ಕೆ ಸತ್ಯದ, ತ್ಯಾಗದ ಸಂದೇಶ ಸಾರಿದ್ದಾರೆ. ಅದೇ ರೀತಿ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸುವವರಿಗಿಂತ ದೊಡ್ಡ ಸಂಬಂಧಿಗಳು ನನಗೆ ಬೇರೆ ಯಾರೂ ಇಲ್ಲ ಎಂದು ಹೇಳಿದರು.
ಗಾಂಧಿ ಪುದುವಟ್ಟು ಸ್ಥಾಪಕ ಎ.ಆರ್.ನಾರಾಯಣ ಘಟ್ಟ ಮಾತನಾಡಿ, ಭಾರತೀಯ ಕಾವ್ಯ ಮೀಮಾಂಸೆಗೆ ಮಹಾತ್ಮಗಾಂಧಿ ಸರ್ವೋದಯ ಮತ್ತು ಅಹಿಂಸೆ ಎಂಬ ಮಹತ್ವವಾದ ರತ್ನಗಳನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಗುಲಾಮಗಿರಿ ವಿರುದ್ಧ ಅವರು ರೂಪಿಸಿದ ಚಳವಳಿ ಚರಿತ್ರಾರ್ಹವಾದದು ಎಂದರು.
ಮಹಾತ್ಮಗಾಂಧಿ ಅಂದು ರೂಪಿಸಿದ ಚಳವಳಿಗೆ ಸತ್ಯಾಗ್ರಹ ಎಂದು ಹೆಸರಿಟ್ಟಿದ್ದರು. ಸತ್ಯಾಗ್ರಹ ಎಂದರೆ, ಸತ್ಯಕ್ಕಾಗಿ ಮಾಡುವ ಆಗ್ರಹ ಎಂಬುದು ಅವರ ಆಶಯವಾಗಿತ್ತು. ಆದರೆ, ಇಂದು ಸತ್ಯಾಗ್ರಹದ ಹೆಸರಿನಲ್ಲಿ ನಡೆಯುತ್ತಿರುವ ಚಳವಳಿಗಳು ಬಹುತೇಕ ದಾರಿ ತಪ್ಪಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇತ್ತೀಚಿಗೆ ಕೈ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಿದ್ದನ್ನು ಖಂಡಿಸಿ ಪ್ರಸನ್ನ ಅವರು ನಡೆಸಿದ ಸತ್ಯಾಗ್ರಹ ನಿಜವಾದ ಸತ್ಯಾಗ್ರಹ ಎಂದು ಬಣ್ಣಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೂಡೇ ಪಿ.ಕೃಷ್ಣ, ಸತ್ಯ, ಅಹಿಂಸೆ ಮೂಲಕ ಅತ್ಯಂತ ಸರಳ ಬದುಕು ನಡೆಸಿದವರು ಗಾಂಧಿ. ಹೀಗಾಗಿ, ಇಂದಿನ ನಮ್ಮ ಸಮಾಜಕ್ಕೆ ಬೇಕಾಗಿರುವುದು ಇಂಜಿನಿಯರ್-ತಂತ್ರಜ್ಞಾನದ ಮನುಷ್ಯರಲ್ಲ. ಬದಲಿಗೆ, ಗಾಂಧಿತತ್ವಗಳನ್ನು ಆದರ್ಶವನ್ನಾಗಿಸಿಕೊಂಡ ಜನಗಳನ್ನು ತಯಾರು ಮಾಡಬೇಕು ಎಂದು ಹೇಳಿದರು.
ಸಮಾಜದಲ್ಲಿ ಕಳಂಕ ರಹಿತವಾದ ಜೀವನ ನಡೆಸುವ, ಆಚಾರ-ವಿಚಾರ ಶುದ್ಧವಾಗಿರಿಸಿಕೊಳ್ಳುವ, ತ್ಯಾಗಮಯ ಜೀವನ ಅಳವಡಿಸಿಕೊಳ್ಳುವ ಹಾಗೂ ಅವಮಾನವನ್ನು ಸಹಿಸಿಕೊಂಡು ಸಮ ಸಮಾಜದ ಕನಸು ಕಾಣುವ ವ್ಯಕ್ತಿಗಳು ಈ ಸಮಾಜಕ್ಕೆ ಬೇಕಾಗಿದೆ. ಹೀಗಾಗಿ, ಗಾಂಧಿ ತತ್ವಗಳನ್ನು ಪ್ರಚಾರ ಮಾಡಬೇಕು. ಆಗ ಮಾತ್ರ ನಮ್ಮ ದೇಶ ಉಳಿಯಲು ಸಾಧ್ಯ ಎಂದು ತಿಳಿಸಿದರು.
ಈ ವೇಳೆ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿಯನ್ನು ಕೆ.ಟಿ.ಗಟ್ಟಿ ಪರವಾಗಿ ಅವರ ಸೋದರ ಕೆ.ಆರ್.ಗಟ್ಟಿಗೆ ಹಾಗೂ ಗಾಂಧಿ ಪುದುವಟ್ಟು ಪ್ರಶಸ್ತಿಯನ್ನು ಡಾ.ವೂಡೇ ಪಿ.ಕೃಷ್ಣಗೆ ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್, ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ ದಾನಿ ವರದಾ ಶ್ರೀನಿವಾಸ್ ಉಪಸ್ಥಿತರಿದ್ದರು.