×
Ad

ಬಿಜೆಪಿ-ಆರೆಸ್ಸೆಸ್ ನವರು ಮೊದಲು ತಮ್ಮ ಮನೆಯಲ್ಲಿ ದನ ಸಾಕಲಿ: ವಿನಯ್ ಕುಲಕರ್ಣಿ

Update: 2017-10-21 21:34 IST

ಬೆಂಗಳೂರು, ಅ. 21: ನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲು ಆಗದ ಸಂಸದ ಪ್ರಹ್ಲಾದ್ ಜೋಶಿ ಕೋಮು ಮತ್ತು ಜಾತಿಗಳ ಮಧ್ಯೆ ಗಲಭೆ ಸೃಷ್ಟಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಸೃಷ್ಟಿಸಿ ಮೇಲೆ ಬಂದಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಟೀಕಿಸಿದ್ದಾರೆ.

ಶನಿವಾರ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದ ವಿವಾದದಿಂದ ಪ್ರಹ್ಲಾದ್ ಜೋಶಿ ಸಂಸದರಾಗಿ ಆಯ್ಕೆಯಾಗಿದ್ದು, ಅಮಾಯಕರ ಯುವಕರ ಮೇಲೆ ಕೇಸುಗಳನ್ನು ಹಾಕಲಾಗಿದ್ದು, ಅವರ ಭವಿಷ್ಯವೇ ಹಾಳಾಗಿದೆ. ಜೋಶಿ ಅವರಿಗೆ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ-ಆರೆಸ್ಸೆಸ್, ಸಂಘ ಪರಿವಾರದವರಷ್ಟೇ ‘ಹಿಂದೂಗಳು’ ಎಂದು ಮುದ್ರೆ ಹಾಕಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸಿಂಧೂ ನಾಗರಿಕತೆ ಮೂಲದ ಭಾರತೀಯರೆಲ್ಲರೂ ಹಿಂದೂಸ್ಥಾನದಲ್ಲಿದ್ದಾರೆಂದ ಅವರು, ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಆರೆಸ್ಸೆಸ್ ಜನರ ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಗೋಹತ್ಯೆಯ ಬಗ್ಗೆ ಬಹಳ ಮಾತನಾಡುವ ಬಿಜೆಪಿ ಮುಖಂಡರು ಮೊದಲು ತಮ್ಮ ಮನೆಯಗಳಲ್ಲಿ ಕನಿಷ್ಠ ಹತ್ತು ದನಗಳನ್ನು ಸಾಕಬೇಕು ಎಂದು ಸಲಹೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಬಗ್ಗೆ ಕೇವಲ ಮಾತನಾಡಿದ್ದೆ ಹೊರತು ಬೇರೇನೂ ಮಾಡಲಿಲ್ಲ. ತಮ್ಮ ಸರಕಾರ ಆಡಳಿತಕ್ಕೆ ಬಂದರೆ ಏನೇನು ಮಾಡ್ತೀನಿ ನೋಡಿ ಅಂದಿದ್ದರೂ, ಆದರೆ, ಏನೂ ಆಗಲಿಲ್ಲ ಎಂದು ಕುಲಕರ್ಣಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News