ವಿಸ್ತೃತ ವರದಿ ಸಿದ್ಧಪಡಿಸಲು ಮೇಯರ್ ಸೂಚನೆ

Update: 2017-10-21 16:19 GMT

ಬೆಂಗಳೂರು, ಅ.21: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಶಿವನಗರ ಬಳಿ ನಿರ್ಮಾಣವಾಗುತ್ತಿರುವ ಕೆಳಸೇತುವೆಯನ್ನು ಮೇಲ್ಸೇತುವೆಯನ್ನಾಗಿ ಪರಿವರ್ತಿಸುವ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಬಿಬಿಎಂಪಿ ಇಂಜಿನಿಯರ್‌ಗಳಿಗೆ ಮೇಯರ್ ಆರ್.ಸಂಪತ್ ರಾಜ್ ಸೂಚನೆ ನೀಡಿದ್ದಾರೆ.

ಕಾಮಗಾರಿ ನಡೆಯುವ ಸ್ಥಳ್ಕಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್, ಕೆಳ ಸೇತುವೆ ಕಾಮಗಾರಿಯಿಂದಾಗಿ ಸುಮಾರು 40ಕ್ಕೂ ಹೆಚ್ಚು ಮರಗಳು ಹಾಗೂ ಇಲ್ಲಿನ ವಿದ್ಯುತ್ ಪರಿವರ್ತಕ ಘಟಕದ ಬಳಿ ಕೆಇಬಿ ವಿದ್ಯುತ್ ಲೈನ್‌ಗೆ ಹಾನಿಯಾಗಿರುವುದರಿಂದ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಬಿಡಬೇಕೆಂದು ಹೇಳಿದರು.

ಕೆಳಸೇತುವೆ ನಿರ್ಮಾಣ ಕಾಮಗಾರಿ 48 ಕೋಟಿ ರೂ. ವೆಚ್ಚವಾಗುತ್ತೆ. ಆದರೆ, ಮೇಲು ಸೇತುವೆಯಾಗಿ ಪರಿವರ್ತನೆ ಮಾಡಿದರೆ 27 ಕೋಟಿ ರೂ. ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ. ಆದುದರಿಂದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿದರೆ ಸರಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮಂಜುನಾಥ ನಗರ ಬಳಿ ಆರಂಭಗೊಂಡಿರುವ ಮೇಲು ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಮೇಯರ್, ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜ. 30ರವರೆಗೆ ಸಾರ್ವಜನಿಕರ ಬಳಕೆಗೆ ಒಪ್ಪಿಸಬೇಕು ಎಂದರು.

ಹಾಗೂ ಬಸವೇಶ್ವರನಗರ ಕೂಡು ರಸ್ತೆಯ ಬಳಿ ಆರಂಭವಾಗಿರುವ ಮೇಲು ಸೇತುವೆ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಬೇಕು. 6 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ಕಡೆ ಮೇಲು ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇವು ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ತಗ್ಗಲಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಮೇಯರ್ ಪದ್ಮಾವತಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ರೊಂದಿಗೆ ಶಿವನಗರ, ಮಂಜುನಾಥ್ ನಗರ, ರಾಜಾಜಿನಗರ ವಾರ್ಡ್‌ಗಲಿಗೆ ಭೇಟಿ ನೀಡಿ, ಇಲ್ಲಿ ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News