ಬೆಂಗಳೂರು ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ವಾಯು ಮಾಲಿನ್ಯ

Update: 2017-10-21 16:23 GMT

ಬೆಂಗಳೂರು, ಅ.21: ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ನಾಲ್ಕು ದಿನದಿಂದ ಪಟಾಕಿ ಸಿಡಿತದಿಂದಾಗಿ ನಗರದಲ್ಲಿ ದಾಖಲೆಯ ಪ್ರಮಾಣದಲ್ಲಿ ವಾಯು ಮಾಲಿನ್ಯವಾಗಿದೆ ಎಂದು ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಗಂಧಕದ ಡೈ ಆಕ್ಸೈಡ್(ಎಸ್‌ಒ2) ಹಾಗೂ ಸಾರಜನಕ ಡೈ ಆಕ್ಸೈಡ್(ಎಸ್‌ಒ2) ಪ್ರಮಾಣ ಪ್ರತಿ ಸಾವಿರ ಲೀಟರ್ ಗಾಳಿಯಲ್ಲಿ 80ಮೈಕ್ರೋ ಗ್ರಾಂ ಇರಬೇಕು. ಆದರೆ, ನಗರ ರೈಲು ನಿಲ್ದಾಣದಲ್ಲಿ 193 ಪಿಎಂ ಮೈಕ್ರೋ ಗ್ರಾಂ, ಬಿಟಿಎಂ ಲೇಔಟ್‌ನಲ್ಲಿ 78.58 ಪಿಎಂ ಮೆಕ್ರೋ ಗ್ರಾಂ ನಷ್ಟು ಮಿತಿ ಮೀರಿ ವಾಯು ಮಾಲಿನ್ಯ ದಾಖಲಾಗಿದೆ.

ಶಬ್ದ ಮಾಲಿನ್ಯ: ಕಳೆದ ನಾಲ್ಕು ದಿನದಿಂದ ಎಡಬಿಡದೆ ಸಿಡಿಸಿದ ಭಾರೀ ಸ್ಫೋಟದ ಪಟಾಕಿಗಳಿಂದ ನಗರದಲ್ಲಿ ಶಬ್ದ ಮಾಲಿನ್ಯ ಉಂಟಾಗಿದೆ. ಇದರಿಂದ ಮೇಲ್ನೋಟಕ್ಕೆ ಸಮಸ್ಯೆಗಳು ಕಾಣದಿದ್ದರೂ ಗರ್ಭಿಣಿ ಸ್ತ್ರೀಯರು, ಬಾಣಂತಿಯರು, ಮಕ್ಕಳು ಹಾಗೂ ವೃದ್ಧರಿಗೆ ಸಮಸ್ಯೆಗಳಾಗಿವೆ. ಈ ಬಗ್ಗೆ ವಸ್ತುನಿಷ್ಠವಾದ ಸಮೀಕ್ಷೆಯಿಂದ ಮಾತ್ರ ಸಮಸ್ಯೆಗಳು ಗೋಚರಿಸಲಿವೆ ಎಂದು ನಂದಿನಿ ಲೇಔಟ್ ಸರಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈಗಾಗಲೇ ನಗರದಲ್ಲಿ ಗುಬ್ಬಚ್ಚಿ ಪಕ್ಷಿ ಕಣ್ಮರೆಯಾಗಿದೆ. ಇನ್ನು ಉಳಿದಿರುವ ಪರಿವಾಳ, ಕಾಗೆ, ಗೊರವಂಕ ಸೇರಿದಂತೆ ವಿಭಿನ್ನ ಜಾತಿಗಳ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಈ ಪಕ್ಷಿಗಳು ತುಂಬಾ ಸೂಕ್ಷ್ಮವಾಗಿದ್ದು, ಭಾರೀ ಸ್ಪೋಟದ ಪಟಾಕಿಗಳ ಸಿಡಿತದಿಂದಾಗಿ ಹಲವು ಪಕ್ಷಿಗಳಿಗೆ ಹೃದಯಾಘಾತಗೊಂಡು ಸಾವು ಸಂಭವಿಸಿದೆ ಎಂದು ವೈದ್ಯರು ಅಭಿಪ್ರಾಯಿಸಿದರು.

ಕಟ್ಟುನಿಟ್ಟಿನ ಕಾನೂನು ಅಗತ್ಯ: ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಲದು. ಮಾಲಿನ್ಯ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕೈಗೊಳ್ಳಬೇಕಾದ ಅಗತ್ಯವಿದೆ. ಕಳೆದ ನಾಲ್ಕು ದಿನದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಸಮೀಕ್ಷೆ ನಡೆಸಿ, ಅದರ ವರದಿಯನ್ನು ಆಧರಿಸಿ ಕಟ್ಟುನಿಟ್ಟಿನ ಕಾನೂನು ಮಾಡುವ ಅಗತ್ಯವಿದೆ ಎನ್ನುತ್ತಾರೆ ನಂದಿನಿ ಲೇಔಟ್‌ನ ವೈದ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News