ಫಲ ಜ್ಯೋತಿಷ್ಯವೆಂಬ ಮೂಢತೆಯ ಬೆನ್ನು ಹತ್ತಿ...

Update: 2017-10-21 18:25 GMT

ಭಾಗ 17

ಇದು ಬಳ್ಕೂರಿನಲ್ಲಿ ನಡೆದ ಘಟನೆ. ನನ್ನ ಸ್ನೇಹಿತ ಹಾಗೂ ವಿಚಾರವಾದಿಯೊಬ್ಬರು ನನಗೊಂದು ದೂರು ನೀಡಿದ್ದರು. ಅವರ ಊರಲ್ಲೊಬ್ಬರು ಶೆಟ್ಟರು. ಅವರಿಗೆ ಮೂರು ಮಂದಿ ಹೆಣ್ಣು ಮಕ್ಕಳು. ಮೂವರೂ ಕಾಲೇಜಿನ ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಶೆಟ್ಟರಿಗೆ ಮಾತ್ರವಲ್ಲ, ಅವರ ಮೂವರು ಹೆಣ್ಣು ಮಕ್ಕಳಿಗೂ ಫಲಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ. ತಮ್ಮ ಜೀವನದ ಯಾವುದೇ ನಿರ್ಧಾರಕ್ಕೆ ಮೊದಲು ತಮ್ಮ ಜಾತಕ ತೋರಿಸದೆ ಪಂಡಿತರಿಂದ ಅಭಿಪ್ರಾಯ ಪಡೆಯದೆ ಅವರು ಮುಂದಿನ ಕಾರ್ಯ ಮಾಡುತ್ತಿರಲಿಲ್ಲ.

ಶೆಟ್ಟರ ಹಿರಿಯ ಪುತ್ರಿ ಒಂದು ಬಾರಿ ತನ್ನ ಜಾತಕವನ್ನು ಪಂಡಿತರಿಗೆ ತೋರಿಸಿದಾಗ, ‘‘ನಿಮಗೆ ಈ ಬಾರಿ ಕೆಟ್ಟ ಯೋಗವಿದೆ. ಇದರಿಂದ ನಿಮ್ಮ ಕುಟುಂಬದ ಒಬ್ಬರು ಸಾವನ್ನಪ್ಪುತ್ತಾರೆ’’ ಎಂದು ಹೇಳಿಬಿಟ್ಟರು. ಇದರಿಂದ ಭಯಗೊಂಡ ಆಕೆ ಏನು ಮಾಡಬೇಕೆಂದು ತೋಚದೆ ಮಾನಸಿಕವಾಗಿ ಕುಬ್ಜಳಾಗತೊಡಗಿದಳು. ಮನೆಯಲ್ಲಿಯೂ ತನ್ನ ಜಾತಕದ ಫಲದೋಷವನ್ನು ಹೇಳಿಕೊಂಡಳು. ಆದರೆ ಮನದ ಆತಂಕ ಮಾತ್ರ ಕಡಿಮೆಯಾಗಿರಲಿಲ್ಲ. ತನಗೆ ಬಂದಿರುವ ದೋಷದ ಪ್ರಕಾರ ಕುಟುಂಬದ ಯಾರಾದರೂ ಸಾಯಲೇ ಬೇಕು. ತಾನೇನಾದರೂ ಸತ್ತರೆ ತನ್ನ ಹೆತ್ತವರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ನನ್ನ ತಂದೆಗೆ ಏನಾದರೂ ಆದರೆ, ನಮ್ಮನ್ನೆಲ್ಲಾ ನೋಡಿಕೊಳ್ಳುವವರು ಯಾರು? ಹೀಗೆಲ್ಲಾ ಯೋಚಿಸಿದ ಆಕೆ ತಾನೊಂದು ನಿರ್ಧಾರಕ್ಕೆ ಬಂದು ಬಿಟ್ಟಳು. ತನ್ನ ಜಾತಕ ದೋಷದಿಂದ ಯಾರಿಗೂ ತೊಂದರೆಯಾಗದಿರಲೆಂದು ಆಕೆ ತನ್ನ ಪ್ರಾಣ ತ್ಯಾಗಕ್ಕೆ ನಿರ್ಧರಿಸಿದಳು. ಹಾಗಾಗಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಳು. ಈ ಸುದ್ದಿಯಿಂದ ವಿಚಲಿತನಾಗಬೇಕಾಗಿದ್ದ ಪಂಡಿತ ಮಾತ್ರ ತನ್ನ ಭವಿಷ್ಯವಾಣಿ ನಿಜವಾಯಿತೆಂದು ಹೇಳಿಕೊಂಡ.

ಈ ವರ್ತನೆ ವಿಚಾರವಾದಿಗಳಾದ ನಮ್ಮನ್ನು ತೀರಾ ಕ್ರೋಧಿತರನ್ನಾಗಿಸಿತು. ಆ ಪಂಡಿತನಿಗೆ ಹತ್ತು ಜಾತಕಗಳನ್ನು ನೀಡುತ್ತೇವೆ. ಅವರಲ್ಲಿ ಯಾರು ಗಂಡು? ಯಾರು ಹೆಣ್ಣು? ಯಾರು ಬದುಕಿದ್ದಾರೆ? ಯಾರು ಸತ್ತಿದ್ದಾರೆಂದು ಸರಿಯಾಗಿ ಹೇಳಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆವು. ಆದರೆ ನಮಗೆ ಆ ಪಂಡಿತನಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಜಾತಕ ನೋಡಿ ಮದುವೆ...

ಇದೊಂದು ವಿಚಿತ್ರವಾದ ಆಚರಣೆ ನಮ್ಮಲ್ಲಿ ತಲೆತಲಾಂತರದಿಂದ ಇಂದಿಗೂ ಪ್ರಸ್ತುತದಲ್ಲಿದೆ. ಜಾತಕ ಕೂಡಿ ಬಂದರೆ ಮಾತ್ರ ಮದುವೆಗೆ ಒಪ್ಪಿಗೆ ನೀಡಲಾಗುತ್ತದೆ. ನನ್ನ ಚಿಕ್ಕಪ್ಪನ ಮಗನೊಬ್ಬ ಜಾತಕ ನೋಡಿಯೇ ಮದುವೆ ಮಾಡಿಕೊಂಡಿದ್ದ. ಆದರೆ ಕೆಲವೇ ತಿಂಗಳಲ್ಲಿ ಆತ ಅಪಘಾತದಲ್ಲಿ ತೀರಿಕೊಂಡ. ಆತನ ತಾಯಿ ತನ್ನ ಸೊಸೆಯ ಜಾತಕವನ್ನೇ ದೂಷಿಸಲು ಆರಂಭಿಸಿದರು. ಹುಡುಗಿಯ ಮನೆಯವರು ಹುಡುಗನ ಜಾತಕದ ದೋಷದ ಬಗ್ಗೆ ಮಾತನಾಡಲಾರಂಭಿಸಿದರು. ಹೀಗೆ ಪರಸ್ಪರ ಒಬ್ಬರ ಮೇಲೊಬ್ಬರು ಅನುಮಾನ ಪಡುತ್ತಾ ಸಾಗುವ ಸನ್ನಿವೇಶಗಳನ್ನು ನಾವು ನಮ್ಮ ಸುತ್ತ ಮುತ್ತ ನೋಡುತ್ತಿರುತ್ತೇವೆ.

ನನ್ನ ಸ್ನೇಹಿತನ ಕಚೇರಿಯಲ್ಲಿ ನಾನು ಒಂದು ದಿನ ಕುಳಿತಿದ್ದಾಗ ಅಲ್ಲ್ಲಿಗೆ ಒಬ್ಬ ವ್ಯಕ್ತಿ ಆಗಮಿಸಿದರು. ಬ್ಯಾಂಕ್‌ನಲ್ಲಿ ಕೆಲಸಕ್ಕಿದ್ದ ತನ್ನ ಮಗಳಿಗೆ ಒಳ್ಳೆಯ ವರ ಇದ್ದರೆ ತೋರಿಸೆಂದರು. ಆಗ ಅಲ್ಲಿಯೇ ಮತ್ತೊಬ್ಬರು ಇದ್ದರು. ಅವರಿಗೆ ಮದುವೆಗೆ ಸಿದ್ಧನಾಗಿದ್ದ ಬ್ಯಾಂಕ್ ಉದ್ಯೋಗಿಯಾಗಿದ್ದ ಮಗನಿದ್ದ. ಜಾತಕಗಳನ್ನು ವಿನಿಮಯ ಮಾಡಿಕೊಂಡು ಒಂದು ವಾರದ ಬಳಿಕ ಭೇಟಿಯಾಗುವ ನಿಶ್ಚಯ ಮಾಡಿ ತೆರಳಿದರು.

ಒಂದು ವಾರದ ನಂತರ ಭೇಟಿಯಾದಾಗ ವರನ ಕಡೆಯವರ ಜ್ಯೋತಿಷಿ ಜಾತಕಗಳಲ್ಲಿ ಹೊಂದಾಣಿಕೆ ಇಲ್ಲ ಎಂದಿದ್ದಾರೆಂದರು. ಶೇ. 20ರಷ್ಟು ಮಾತ್ರವೇ ಹೊಂದಾಣಿಕೆ ಎನ್ನಲಾಗಿತ್ತು. ಆದರೆ ವಧುವಿನ ಕಡೆಯ ಜ್ಯೋತಿಷಿ ಹೊಂದಾಣಿಕೆ ಇದೆ ಎಂದರು. ಅದೂ ಶೇ. 80ರಷ್ಟು ಹೊಂದಾಣಿಕೆಯೊಂದಿಗೆ. ವಿಶೇಷವೆಂದರೆ ಇಬ್ಬರೂ ಬೇರೆ ಬೇರೆ ದಿನಗಳಂದು ಒಬ್ಬರೇ ಜ್ಯೋತಿಷಿಗೆ ಜಾತಕಗಳನ್ನು ತೋರಿಸಿದ್ದು!. ನನ್ನ ಸ್ನೇಹಿತರು ಮತ್ತೆ ಅದೇ ಜ್ಯೋತಿಷಿಗೆ ಜಾತಕಗಳನ್ನು ತೋರಿಸಿದರು. ಈ ಸಂದರ್ಭ ತಲಾ ಶೇ. 50ರಷ್ಟು ಫಲಿತಾಂಶ ಬಂತು. ಕೊಡುವುದು, ಕೊಳ್ಳುವುದು ಮತ್ತಿತರ ವಿಷಯಗಳು ಸರಿಯಾಗಿದ್ದರೆ ಸಂಬಂಧ ಬೆಳೆಸಬಹುದು ಎಂದವರು ಸಲಹೆಯನ್ನೂ ನೀಡಿದರು. ಇದೇ ಅಲ್ಲವೆ ಜ್ಯೋತಿಷ್ಯದ ವೈಜ್ಞಾನಿಕತೆ!

ನಮ್ಮ ಅಮ್ಮ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಅವರು ಕೆಲವು ತಿಂಗಳು ಮಾತ್ರವೇ ಬದುಕಿರುತ್ತಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ ನಮ್ಮ ತಂದೆಯವರಿಗೆ ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇದ್ದ ಕಾರಣ ಅವರು ನಗರದ ಹೆಸರುವಾಸಿ ಫಲ ಜ್ಯೋತಿಷ್ಯರೊಬ್ಬರ ಬಳಿ ಅಮ್ಮನ ಜಾತಕ ಕೊಂಡೊಯ್ದರು. ಅವರು ಜಾತಕ ನೋಡಿ ನಿಮ್ಮ ಪತ್ನಿ ಗುಣಮುಖರಾಗುತ್ತಾರೆ. ನವೆಂಬರ್ ತಿಂಗಳವರೆಗಿನ ಕೆಟ್ಟ ಗ್ರಹಚಾರವಷ್ಟೆ ಎಂದರು. ಆದರೆ ನಮ್ಮ ಅಮ್ಮ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲೇ ತೀರಿಕೊಂಡರು!

ಭವಿಷ್ಯವಾಣಿಯೆಂಬ ಪ್ರಚಾರದಾಟ...

ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಭವಿಷ್ಯವಾಣಿಯನ್ನು ನೀವು ನೋಡಿರಬಹುದು. ಕೇಳಿರಬಹುದು. ಪತ್ರಿಕೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾಲಂ ಕೂಡಾ ಮೀಸಲಾಗಿರುತ್ತದೆ. ಇನ್ನು ಚುನಾವಣೆ ಬಂದಾಗಲಂತೂ ಈ ಭವಿಷ್ಯವಾಣಿಗೆ ಡಿಮಾಂಡೋ ಡಿಮಾಂಡು. ಇಷ್ಟು ಮಾತ್ರವಲ್ಲ, ರಾಜಕಾರಣಿಗಳು ತಮ್ಮ ನಾಮಪತ್ರ ಸಲ್ಲಿಸಲು ಹೊರಡುವ ವೇಳೆ, ಸಲ್ಲಿಸುವ ವೇಳೆಗೂ ಆಯ್ಕೆ ಮಾಡಲು ಜ್ಯೋತಿಷ್ಯವನ್ನು ಅವಲಂಬಿಸಿರುತ್ತಾರೆ.

ಇಂತಹ ಒಂದು ಸಂದರ್ಭದಲ್ಲಿ ವಿಚಾರವಾದಿಗಳ ತಂಡ ಫಲಜ್ಯೋತಿಷಿಗಳಿಗೆ ಪಂಥಾಹ್ವಾನ ನೀಡಿದೆವು. ಈ ಸ್ಪರ್ಧೆಗೆ 50ಕ್ಕೂ ಅಧಿಕ ಪ್ರವೇಶ ಪತ್ರಗಳು ಬಂದವು. ಆದರೆ ವಿಶೇಷವೆಂದರೆ ಈ ಪ್ರವೇಶ ಪತ್ರಗಳಲ್ಲಿ ಸರಿಯಾದದ್ದು ಯಾವುದೂ ಇರಲಿಲ್ಲ. ನಾವು ಪ್ರ ಬಾರಿಯೂ 20 ಪ್ರಶ್ನೆಗಳನ್ನು ಕೇಳಿ, ಅವುಗಳಲ್ಲಿ 19ಕ್ಕೆ ಸರಿಯಾದ ಉತ್ತರಗಳು ಬಂದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದ್ದೆವು. ಆದರೆ ಈವರೆಗೆ ಅಂತಹ ಉತ್ತರಗಳು ನಮಗೆ ಬಂದೇ ಇಲ್ಲ. ಸಾಮಾನ್ಯವಾದ ತಿಳುವಳಿಕೆ ಉಳ್ಳವರೂ ನೀಡಬಹುದಾದ ಸರಿ ಉತ್ತರಗಳಿಗೆ ತಪ್ಪಾಗಿ ಬರೆದವರೂ ಇದ್ದಾರೆ. ಸೆಪ್ಟಂಬರ್ 11, 2001 ಜಗತ್ತಿನ ಇತಿಹಾಸವನ್ನು ಬದಲಾಯಿಸಿದ ಘಟನೆಗಳಲ್ಲಿ ಒಂದು. ಆದರೆ ಇದರ ಬಗ್ಗೆ ಯಾವ ಜ್ಯೋತಿಷಿಯೂ ಭವಿಷ್ಯ ನುಡಿದಿರಲಿಲ್ಲ. 2002ರ ಎಪ್ರಿಲ್ ತಿಂಗಳಲ್ಲಿ ನನ್ನ ಕಚೇರಿಗೆ ಒಬ್ಬ ನಿವೃತ್ತ ಗಣಿತ ಶಿಕ್ಷಕರು ಬಂದಿದ್ದರು. ಅವರು ಪಾರ್ಟ್‌ಟೈಮ್ ಆಗಿ ಫಲಜ್ಯೋತಿಷ್ಯವನ್ನು ಮಾಡಿಕೊಂಡಿದ್ದರು. ತನ್ನದು ಮಾತ್ರ ನಿಖರವಾದ ಪದ್ಧತಿ ಉಳಿದವರದ್ದು ನಾನ್‌ಸೆನ್ಸ್ ಎಂದು ಹೇಳುತ್ತಿದ್ದ ಅವರು ನನ್ನ ಡೈರಿತೆಗೆದು, ಮೇ ತಿಂಗಳ ಮೂರು ದಿನಗಳನ್ನು ಗುರುತಿಸಿ, ಅಲ್ಲಿ "disaster'' ಎಂದು ಬರೆಯಿರಿ ಎಂದರು. ಏಕೆ ಎಂದು ಕೇಳಿದರೆ ಆ ದಿನ ಪಂಚಗ್ರಹ ಯೋಗವಿದೆ. ತತ್ಕಾರಣ ಜಗತ್ತನ್ನೇ ನಡುಗಿಸುವ ಘಟನೆಗಳು ನಡೆಯಲಿದೆ ಎಂದರು. ದಿನಗಳು ಕಳೆದವು. ಅವರು ಹೇಳಿದ ದಿನ ಜಗತ್ತನ್ನು ನಡುಗಿಸುವ ಯಾವ ಘಟನೆಯೂ ನಡೆಯಲಿಲ್ಲ. ಮುಂದೆ ಅವರೂ ನನ್ನ ಬಳಿ ಬರಲಿಲ್ಲ!

ತಮ್ಮದು ವಿಜ್ಞಾನವೆಂದು ಹೇಳುವ ಫಲ ಜ್ಯೋತಿಷಿಗಳಿಗೆ ಅದನ್ನು ಸಾಕ್ಷ ಸಹಿತ ಸಾಬೀತುಪಡಿಸುವ ಅವಕಾಶವನ್ನು ಒದಗಿಸಲು ನಮ್ಮ ಸವಾಲು ಯಾವತ್ತೂ ಇರುತ್ತದೆ. ಹತ್ತು ಮಂದಿಯ ಹುಟ್ಟಿದ ಸಮಯ, ಸ್ಥಳ ಮತ್ತು ತಾರೀಕುಗಳನ್ನು ತಿಳಿಸುತ್ತೇವೆ. ಇವರಲ್ಲಿ ಯಾರು ಗಂಡು? ಯಾರು ಹೆಣ್ಣು? ಯಾರು ಬದುಕಿದ್ದಾರೆ? ಯಾರು ಸತ್ತಿದ್ದಾರೆ? ಎಂದು ಇಪ್ಪತ್ತರಲ್ಲಿ 19 ಸರಿಯಾದ ಉತ್ತರಗಳನ್ನು ಕೊಟ್ಟಲ್ಲಿ ನನ್ನ ಆಸ್ತಿಯೆಲ್ಲಾ ಅವರ ಹೆಸರಿಗೆ ಬರೆದು ಸಾಯುವವರೆಗೂ ಅವರ ಗುಲಾಮನಾಗಿರುತ್ತೇನೆ ಎಂದು ಸವಾಲು ಕಳೆದ 10 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಚಾಲ್ತಿಯಲ್ಲಿದೆ.

ಈ ಸವಾಲು ಪತ್ರಿಕೆಗಳಲ್ಲಿ ಪ್ರಕಟವಾದ ಸಂದರ್ಭದಲ್ಲೊಮ್ಮೆ ಕಾರ್ಕಳದ ಜ್ಯೋತಿಷಿಯೊಬ್ಬರು ತಾವು ಇದನ್ನು ಸ್ವೀಕರಿಸುವುದಾಗಿ ತಿಳಿಸಿದ್ದರು. ಅವರು ನೀಡಿದ್ದ ವಿಳಾಸಕ್ಕೆ ನನ್ನ ಸಂಬಂಧಿಯೊಬ್ಬರನ್ನು ಕಳುಹಿಸಿ ವಿಚಾರಿಸುವಂತೆ ಕೋರಿಕೊಂಡಿದ್ದೆ. ಅವರು ಅಲ್ಲಿ ಹೋದಾಗ ಆ ಜ್ಯೋತಿಷಿ, ತಾನು ಭವಿಷ್ಯ ಹೇಳುವುದಿಲ್ಲ. ಆದರೆ ತನ್ನ ಮೇಲೆ ವೆಂಕಟರಮಣ ದೇವರು ಆವಾಹನೆಯಾದಾಗ ಭವಿಷ್ಯ ಹೇಳುವುದಾಗಿ ನುಡಿದರು. ಇದು ಹೇಗೆ ಎಂದು ಕೇಳಿದಾಗ ತನ್ನ ಶಕ್ತಿಯು ಪ್ರದರ್ಶನಕ್ಕಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆದರೂ ಸೋಲೊಪ್ಪದ ಅವರು, ತನ್ನಲ್ಲಿ ಬಹಳಷ್ಟು ಶಕ್ತಿ ಇರುವುದಾಗಿ ಹೇಳಿಕೊಂಡರು. ಮನಸ್ಸು ಮಾಡಿದರೆ ಗಾಳಿಯಲ್ಲಿ ಕೈಯಾಡಿಸಿ ಬೆಂಗಳೂರಿನ ಹೊಟೇಲಿನಲ್ಲಿ ತಯಾರಾದ ಬೋಂಡಾವನ್ನು ಇಲ್ಲಿಗೆ ತರಿಸುವುದಾಗಿ ಹೇಳಿಕೊಂಡರಂತೆ! ನನ್ನ ಸಂಬಂಧಿಗೋ ಖುಷಿಯೋ ಖುಷಿ. ‘ಬೇಗನೆ ತರಿಸಯ್ಯ, ನನಗೆ ಹಸಿವಾಗುತ್ತಿದೆ ಎಂದರಂತೆ!’ ಅದಕ್ಕೆ ಆ ಜ್ಯೋತಿಷಿ, ಇಂತಹ ಶಕ್ತಿಗಳನ್ನು ಲಘುವಾಗಿ ಪರಿಗಣಿಸದಿರು ಎಂದು ಗದರಿದರಂತೆ. ಅದಕ್ಕೆ ನನ್ನ ಸಂಬಂಧಿ ಪ್ರತಿಯಾಗಿ ನನಗೆ ಶಕ್ತಿಯ ಬಗ್ಗೆ ಏನೂ ಗೊತ್ತಿಲ್ಲ. ನನಗೆ ಈಗ ಮುಖ್ಯವಾಗಿದ್ದು ಹಸಿವು ಎಂದೇ ಬಿಟ್ಟರು. ಆದರೆ ಯಾವುದೇ ಪವಾಡ ಮಾತ್ರ ನಡೆಯಲಿಲ್ಲ. ಬೆಂಗಳೂರಿನ ಬೋಂಡಾವೂ ಬರಲಿಲ್ಲ. ನನ್ನ ಸಂಬಂಧಿಯ ಹಸಿವೂ ನೀಗಲಿಲ್ಲ!

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News