ಮಿಂಚಿದ ಹಸನ್ ಅಲಿ; ಪಾಕಿಸ್ತಾನಕ್ಕೆ ಜಯ

Update: 2017-10-21 18:31 GMT

ಶಾರ್ಜಾ(ಯುಎಇ), ಅ.21: ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ ಮಧ್ಯಮ ವೇಗದ ಬೌಲರ್ ಹಸನ್ ಅಲಿ(3-37), ಸ್ಪಿನ್ನರ್‌ಗಳಾದ ಶಾದಾಬ್ ಖಾನ್(2-29)ಹಾಗೂ ಇಮಾದ್ ವಸೀಂ(2-13) ಸಾಹಸದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಹಗಲು-ರಾತ್ರಿ 4ನೆ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ ತಂಡ ಹಸನ್ ಅಲಿ ನೇತೃತ್ವದ ಪಾಕ್ ಬೌಲರ್‌ಗಳ ದಾಳಿಗೆ ನಿರುತ್ತರವಾಗಿ 43.4 ಓವರ್‌ಗಳಲ್ಲಿ ಕೇವಲ 173 ರನ್‌ಗಳಿಗೆ ಆಲೌಟಾಯಿತು.

ಶಾರ್ಜಾ ಸ್ಟೇಡಿಯಂನಲ್ಲಿ ಕೇವಲ ಲಹಿರು ತಿರಿಮನ್ನೆ 94 ಎಸೆತಗಳಲ್ಲಿ 62 ರನ್ ಗಳಿಸಿ ಲಂಕೆೆಯ ಪರ ಏಕಾಂಗಿ ಹೋರಾಟ ನೀಡಿದರು.

ಗೆಲ್ಲಲು ಸುಲಭ ಸವಾಲು ಪಡೆದ ಪಾಕ್ ಪರ ಬಾಬರ್ ಆಝಂ(ಅಜೇಯ 69) ಹಾಗೂ ಶುಐಬ್ ಮಲಿಕ್(ಅಜೇಯ 69) ಅಜೇಯ ಅರ್ಧಶತಕ ದಾಖಲಿಸಿ 39 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕಿಸ್ತಾನ ಮೊದಲ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು. ಆಗ ಆಝಂ ಹಾಗೂ ಮಲಿಕ್ ನಾಲ್ಕನೆ ವಿಕೆಟ್‌ಗೆ 119 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಮಿಲಿಂದ ಸಿರಿವರ್ಧನ ಎಸೆತವನ್ನು ಬೌಂಡರಿ ಹಾಗೂ ಸಿಕ್ಸರ್‌ಗೆ ಅಟ್ಟಿದ ಮಲಿಕ್ ಗೆಲುವಿನ ಮುದ್ರೆಯೊತ್ತಿದರು.

ಅಜೇಯ 69 ರನ್ ಗಳಿಸಿದ ಮಲಿಕ್ 81 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕ ಬಾರಿಸಿದ್ದ ಆಝಂ 101 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 69 ಗಳಿಸಿದರು.

ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಓಟ ಆರಂಭಿಸಿರುವ ಪಾಕಿಸ್ತಾನ ಇದೀಗ ಸತತ 8ನೆ ಜಯ ದಾಖಲಿಸಿದೆ. ಇದೇ ವೇಳೆ ಶ್ರೀಲಂಕಾ ತಂಡ ಸತತ 11ನೆ ಏಕದಿನ ಪಂದ್ಯವನ್ನು ಸೋತಿದೆ. ಉಭಯ ತಂಡಗಳು ಸೋಮವಾರ ಐದನೆ ಹಾಗೂ ಕೊನೆಯ ಪಂದ್ಯವನ್ನು ಆಡಲಿವೆ.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಇನಿಂಗ್ಸ್‌ನ 2ನೆ ಎಸೆತದಲ್ಲಿ ನಾಯಕ ಉಪುಲ್ ತರಂಗ ವಿಕೆಟ್‌ನ್ನು ಕಳೆದುಕೊಂಡಿತು. ಚೊಚ್ಚಲ ಪಂದ್ಯ ಆಡಿರುವ ಎಡಗೈ ವೇಗಿ ಉಸ್ಮಾನ್ ಶಿನ್ವಾರಿ ಉತ್ತಮ ಫಾರ್ಮ್‌ನಲ್ಲಿದ್ದ ತರಂಗ ವಿಕೆಟ್‌ನ್ನು ಕಬಳಿಸಿದರು. ಇನ್ನೋರ್ವ ಎಡಗೈ ವೇಗಿ ಜುನೈದ್ ಖಾನ್ ಅವರು ನಿರೊಶನ್ ಡಿಕ್ವೆಲ್ಲಾ(16 ಎಸೆತ, 22 ರನ್) ವಿಕೆಟ್ ಕಬಳಿಸಿದರು. ದಿನೇಶ್ ಚಾಂಡಿಮಾಲ್(16) ರನೌಟಾದರು.

ತಿರಿಮನ್ನೆ ಹಾಗೂ ಸಿರಿವರ್ಧನೆ(13) ಆರನೆ ವಿಕೆಟ್‌ಗೆ 32 ರನ್ ಜೊತೆಯಾಟ ನಡೆಸಿದರು. ತಿರಿಮನ್ನೆ ಹಾಗೂ ಅಕಿಲಾ ದನಂಜಯ 8ನೆ ವಿಕೆಟ್‌ಗೆ 43ರನ್ ಜೊತೆಯಾಟ ನಡೆಸಿದರು. ಹಸನ್ ಅಲಿ ಈ ಜೋಡಿಯನ್ನು ಬೇರ್ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News