‘ಕಂಪ್ಯೂಟರಿನ ಭಾಷೆ ಇಂಗ್ಲಿಷ್ ಮಾತ್ರ’ ಇದು ವಿದ್ಯಾವಂತರ ಮೂಢನಂಬಿಕೆ

Update: 2017-10-21 18:42 GMT

‘ ಕಂಪ್ಯೂಟರ್ ಎಂದರೆ ಇಂಗ್ಲಿಷ್’’ ಎಂಬ ಮಾತು ಇಂದಿಗೂ ಪ್ರಚಲಿತದಲ್ಲಿದೆ. ಕಂಪ್ಯೂಟರಿನ ಭಾಷೆ ಇಂಗ್ಲಿಷ್ ಮಾತ್ರ ಎಂಬುದು ವಿದ್ಯಾವಂತರ ಮೂಢನಂಬಿಕೆ. ಕನ್ನಡವನ್ನು ಕಂಪ್ಯೂಟರುಗಳಲ್ಲಿ ಸಮರ್ಥವಾಗಿ ಬಳಸಬಹುದು ಎಂಬ ತಿಳುವಳಿಕೆಯ ಕೊರತೆಯು ಕಂಪ್ಯೂಟರುಗಳಲ್ಲಿ ಕನ್ನಡ ಬಳಕೆಗೆ ಅಡ್ಡಿಯಾಗಿದೆ. ತಿಳುವಳಿಕೆ ಇದ್ದವರು ಇಂದಿಗೂ ಹಲವು ಸಮಸ್ಯೆಗಳನ್ನು ಮುಂದೊಡ್ಡುತ್ತಾರೆ. ಲಭ್ಯವಿರುವ ಕನ್ನಡದ ತಂತ್ರಾಂಶಗಳ ಬಳಕೆ ಕುರಿತ ತರಬೇತಿ ಸೌಲಭ್ಯಗಳಿಲ್ಲದಿರುವುದು; ಕನ್ನಡ ಭಾಷಾ ಬಳಕೆ ಕಲಿಸುವ ಕಂಪ್ಯೂಟರ್ ಶಿಕ್ಷಣದ ಕೊರತೆ ಎಲ್ಲೆಡೆ ಇರುವುದು ವಾಸ್ತವಾಂಶ. ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಕಂಪ್ಯೂಟರುಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಹಲವು ಸೌಲಭ್ಯಗಳು ಇಂದು ಅಂಗೈಯಲ್ಲಿಯೇ ಲಭ್ಯವಾಗಿವೆ. ಆದರೆ, ಅವುಗಳ ಕುರಿತು ಸರಿಯಾದ ತಿಳುವಳಿಕೆ ಪಡೆದರೆ ಮಾತ್ರವೇ ಅನುಷ್ಠಾನ ಮತ್ತು ಬಳಕೆ ಸುಲಭವಾಗುತ್ತದೆ. ಇಂಟರ್‌ನೆಟ್‌ನಲ್ಲಿ ಹುಡುಕಿದರೆ ನೂರಾರು ಯು ಟ್ಯೂಬ್ ಚಾನಲ್‌ಗಳಲ್ಲಿನ ವೀಡಿಯೊ ತುಣುಕುಗಳು ಸಿಗುತ್ತವೆ. ನೋಡಿ ತಿಳಿದು ಕನ್ನಡ ಬಳಕೆ ಕಲಿಯುವುದಕ್ಕೆ ಅನೇಕ ಮಾರ್ಗಗಳಿವೆ. ಆದರೂ, ಕಂಪ್ಯೂಟರಿನಲ್ಲಿ ಕನ್ನಡವನ್ನು ಬಳಸುವುದು ಕಷ್ಟಕರ ಮತ್ತು ಕನ್ನಡ ಬಳಸಲು ಇಂದಿಗೂ ಹಲವಾರು ಸಮಸ್ಯೆಗಳಿವೆ ಎಂಬ ನಂಬಿಕೆಗೆ ಜೋತುಬಿದ್ದವರು ಇಲ್ಲದಿಲ್ಲ.

ಕಂಪ್ಯೂಟರಿನಲ್ಲಿ ಕನ್ನಡ ಬಳಕೆ ಆರಂಭವಾದಾಗ ಮತ್ತು ನಂತರದ ಕಾಲಘಟ್ಟಗಳಲ್ಲಿ ಹಲವು ತಾಂತ್ರಿಕ, ಶೈಕ್ಷಣಿಕ ಮತ್ತು ಸಂಶೋಧನಾ ಸಮಸ್ಯೆಗಳಿದ್ದದ್ದು ನಿಜ. ಕಾಲಾನಂತರದಲ್ಲಿ ಅವುಗಳು ಪರಿಹಾರಗೊಂಡು ಕನ್ನಡವೂ ಸಹ ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಕಂಪ್ಯೂಟರಿನಲ್ಲಿ ಸ್ಥಾನಮಾನ ಗಳಿಸಿರುವುದು ಸತ್ಯ. ಕನ್ನಡಕ್ಕೆ ಲಭ್ಯವಿರುವ ತಂತ್ರಾಂಶಗಳ ಕುರಿತಾದ ಮಾಹಿತಿ ಕೊರತೆ ಮತ್ತು ಅನುಷ್ಠಾನದ ಸಮಸ್ಯೆಗಳೂ ಇದ್ದವು. ಆಡಳಿತ ಕೆಲಸಕಾರ್ಯಗಳಿಗಾಗಿ ಕಂಪ್ಯೂಟರುಗಳಲ್ಲಿ ಇಂಗ್ಲಿಷ್ ಬದಲಿಗೆ ಕನ್ನಡವನ್ನು ಬಳಸಬೇಕು ಎಂಬ ಇಚ್ಛಾಶಕ್ತಿಯ ಕೊರತೆಯೂ ಇತ್ತು. ಅದು ಇಂದಿಗೂ ಮುಂದುವರಿದಿದೆ ಎಂದರೆ ಅತಿಶಯೋಕ್ತಿ ಅಲ್ಲ. ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ಸಾಧ್ಯವಿರುವ, ಸೂಕ್ತವಾದ, ಎಲ್ಲ ಪರಿಹಾರಗಳನ್ನು ಕನ್ನಡ ಕಂಪ್ಯೂಟರ್ ತಂತ್ರಜ್ಞರು ಪರಿಶೋಧಿಸಿದ್ದಾರೆ. ಕನ್ನಡಕ್ಕಾಗಿ ಹಲವು ಸುಧಾರಿತ ತಂತ್ರಜ್ಞಾನಗಳು ಇಂದು ಲಭ್ಯವಿವೆ. ಶೈಕ್ಷಣಿಕ, ಮತ್ತು ಸಂಶೋಧನಾ ಹಾಗೂ ಅಭಿವೃದ್ಧಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ, ಆಡಳಿತ ಕ್ಷೇತ್ರದಲ್ಲಿನ ಕಂಪ್ಯೂಟರುಗಳಲ್ಲಿ ಕನ್ನಡದ ಅನುಷ್ಠಾನದ ವಿಚಾರದಲ್ಲಿ ಇರುವ ಇಚ್ಛಾಶಕ್ತಿಯ ಕೊರತೆಯು ಇನ್ನೂ ನೀಗಬೇಕಾಗಿದೆ. ಕಂಪ್ಯೂಟರ್ ಒಂದು ವಿದ್ಯುನ್ಮಾನ ಯಂತ್ರ, ಅದಕ್ಕೆ ಭಾಷೆಯ ಮಿತಿಯಿಲ್ಲ. ‘ಒಂದು’ ಮತ್ತು ‘ಸೊನ್ನೆ’ಗಳ ಸಂಯೋಜನೆಯ ವಿದ್ಯುನ್ಮಾನ ಸಂಕೇತಗಳೇ ಮೂಲಾಧಾರವಾಗಿರುವ ಯಂತ್ರಭಾಷೆಯನ್ನು ಮಾತ್ರವೇ ಕಂಪ್ಯೂಟರ್ ಅರ್ಥಮಾಡಿಕೊಳ್ಳ ಬಲ್ಲದು. ಸಹಜ ಭಾಷೆಯನ್ನು ಯಂತ್ರಭಾಷೆಗೆ ತರ್ಜುಮೆಗೊಳಿಸಿ ಉಪಾಯದಿಂದ ಕೆಲಸ ಸಾಧಿಸುವ ತಂತ್ರಾಂಶದ ಸಹಾಯದಿಂದ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತದೆ. ಇವೆಲ್ಲವನ್ನೂ ಅರಿತವರು ಮಾತ್ರವೇ ಕಂಪ್ಯೂಟರಿನಲ್ಲಿ ಕನ್ನಡವನ್ನು ಬಳಸುವುದು ಕಷ್ಟವೇನಲ್ಲ ಎಂದು ತಿಳಿಯಬಲ್ಲರು. ಪ್ರೋಗ್ರಾಮಿಂಗ್ ಮೂಲಕ ತಂತ್ರಜ್ಞರು ಕಂಪ್ಯೂಟರಿಗೆ ಕಲಿಸಿರುವ ಭಾಷೆಯಲ್ಲಿ ಅದು ಸಂವಹನ ನಡೆಸುತ್ತದೆ. ಭಾಷೆಯ ವಿಷಯದಲ್ಲಿ ಕಂಪ್ಯೂಟರು ಒಂದು ತಟಸ್ಥ ಮಾಧ್ಯಮ ಎಂಬ ಪ್ರಾಥಮಿಕ ಮಾಹಿತಿಯ ಕೊರತೆ ಬಹುತೇಕರಲ್ಲಿ ಇದೆ.

ಪ್ರಸ್ತುತ,‘ಕಂಪ್ಯೂಟರ್ ವಿಜ್ಞಾನ’ದ ಕಲಿಕೆಯಲ್ಲಿ,‘ಕಂಪ್ಯೂಟರ್ ಶಿಕ್ಷಣ’ದಲ್ಲಿ, ‘ಕಂಪ್ಯೂಟರ್ ಬಳಕೆ’ಯ ತರಬೇತಿಯಲ್ಲಿ, ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಗೆ ಸ್ಥಾನವೇ ಇಲ್ಲದಿರುವುದು ವಾಸ್ತವದ ಸ್ಥಿತಿ. ಮೂಲತಃ ಕಂಪ್ಯೂಟರುಗಳು ಇಂಗ್ಲಿಷ್ ಭಾಷಾ ಬಳಕೆಗಾಗಿ ಸಿದ್ಧಪಡಿಸಲಾಗಿರುವ ವಿದ್ಯುನ್ಮಾನ ಯಂತ್ರಗಳು ಮತ್ತು ಇವುಗಳ ಕಾರ್ಯಾಚರಣೆ ವ್ಯವಸ್ಥೆ ಇಂಗ್ಲಿಷ್‌ನಲ್ಲಿಯೇ ಇದೆ. ಇದೇ ವ್ಯವಸ್ಥೆಯ ಮೇಲೆ ಕನ್ನಡದ ಕಾರ್ಯತಂತ್ರವನ್ನು ರೂಪಿಸಿ ಕನ್ನಡದ ತಂತ್ರಾಂಶಗಳನ್ನು ಸಿದ್ಧಪಡಿಸುವ ಸವಾಲು ಮತ್ತು ಪರಿಶ್ರಮಗಳಿದ್ದವು. ಕನ್ನಡವನ್ನು ಬಳಸಲು ಸಾಧ್ಯವಾಗುವ ಸುಲಭವಾದ ಸಿದ್ಧ-ತಂತ್ರಾಂಶಗಳ ಕೊರತೆಯಿತ್ತು. ತಂತ್ರಾಂಶ ಲಭ್ಯವಿದ್ದರೂ, ಕನ್ನಡ ಲಿಪಿಯನ್ನು ಬೆರಳಚ್ಚಿಸುವಲ್ಲಿನ ಏಕರೂಪದ, ಶಿಷ್ಟ ಮತ್ತು ವೈಜ್ಞಾನಿಕ ಕೀಲಿಮಣೆ ವಿನ್ಯಾಸಗಳು ಇರಲಿಲ್ಲ. ಅಂದು, ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಹತ್ತಾರು ತಂತ್ರಾಂಶಗಳಲ್ಲಿ ಪರಸ್ಪರ ಮಾಹಿತಿ ವಿನಿಮಯ ಸೌಲಭ್ಯ ಇರಲಿಲ್ಲ. ಒಂದು ತಂತ್ರಾಂಶವನ್ನು ಬಳಸಿ ಸಿದ್ಧಪಡಿಸಲಾದ ಕನ್ನಡದ ಮಾಹಿತಿಯನ್ನು ಮತ್ತೊಂದು ತಂತ್ರಾಂಶದಲ್ಲಿ ಬಳಸುವುದು ಸಾಧ್ಯವಾಗದ ಪರಿಸ್ಥಿತಿಯಿತ್ತು. ಇವೆಲ್ಲವೂ ಕನ್ನಡ ಭಾಷೆಯು ಕಂಪ್ಯೂಟರಿನಲ್ಲಿ ಸೀಮಿತವಾಗಿ ಬಳಕೆಯಲ್ಲಿರುವುದಕ್ಕೆ ‘ಕಂಪ್ಯೂಟರ್ ತಂತ್ರಜ್ಞಾನ’ದ ತಾಂತ್ರಿಕ ಕಾರಣಗಳಾಗಿದ್ದವು. ಕನ್ನಡ ಲಿಪಿವ್ಯವಸ್ಥೆಯು ರೂಪುಗೊಳ್ಳುವಲ್ಲಿ ಇದ್ದ ಸಮಸ್ಯೆಗಳನ್ನು ಮೂರು ನೆಲೆಗಳಲ್ಲಿ ಗುರುತಿಸಬಹುದು. ತಂತ್ರಜ್ಞಾನದ ನೆಲೆಯಲ್ಲಿ, ತಂತ್ರಾಂಶ ತಯಾರಕರ ನೆಲೆಯಲ್ಲಿ ಮತ್ತು ಬಳಕೆದಾರರ ನೆಲೆಯಲ್ಲಿ ಗುರುತಿಸಬಹುದು. ತಂತ್ರಜ್ಞಾನದ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು - ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ಲಿಪಿ ಕ್ಲಿಷ್ಟ ಮತ್ತು ಸಂಕೀರ್ಣವಾದುದು ನಿಜವೇ, ಇಂತಹ ಕನ್ನಡದ ಲಿಪಿಯನ್ನು ಕಂಪ್ಯೂಟರಿಗೆ ಅಳವಡಿಸುವುದು ಸವಾಲಿನ ಕೆಲಸವೇ ಆಗಿತ್ತು. ಕನ್ನಡ ಪಠ್ಯ ಊಡಿಕೆಗೆ ಎಂತಹ ಕೀಲಿಮಣೆ ಇರಬೇಕು ಎಂಬ ಜಿಜ್ಞಾಸೆಗಳಿದ್ದವು. ಡಾಸ್ ಪರಿಸರದ ಕಪ್ಪುಬಿಳುಪು ಮಾನಿಟರ್‌ನಲ್ಲಿ ಕನ್ನಡ ಪಠ್ಯದಲ್ಲಿ ಒತ್ತಕ್ಷರಗಳು ಕಾಣುತ್ತಲೇ ಇರಲಿಲ್ಲ. ಕನ್ನಡದ ಅಕ್ಷರಗಳಿಗೆ ಅಕ್ಷರಸ್ಥಾನ ನಿಗದಿಪಡಿಸುವಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಕನ್ನಡ ತಂತ್ರಾಂಶ ತಯಾರಿಕೆಯಲ್ಲಿ ತಂತ್ರಾಂಶ ತಯಾರಕರು ಇಂತಹ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಕನ್ನಡಕ್ಕೆ ಸುಲಭವಾದ ಕೀಲಿಮಣೆ ವಿನ್ಯಾಸ ತಯಾರಿಸುವುದು ಸಮಸ್ಯೆಯೇ ಅಗಿತ್ತು.; ಕೀಲಿಯೊತ್ತುಗಳನ್ನು ಆಧರಿಸಿ ಅಕ್ಷರಗಳ ತುಂಡುಗಳು ಜೋಡಣೆಗೊಂಡು ಪೂರ್ಣಾಕ್ಷರಗಳನ್ನಾಗಿಸಿ ಪರದೆಯಲ್ಲಿ ತೋರಿಸುವುದು, ಅದನ್ನು ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿಡುವುದು ಇತ್ಯಾದಿಗಳು ಕಷ್ಟಕರವಾಗಿತ್ತು. ಒಬ್ಬೊಬ್ಬ ತಂತ್ರಾಂಶ ತಯಾರಕರು ತಮಗೆ ತೋಚಿದಂತೆ ಕನ್ನಡದ ಅಕ್ಷರಗಳಿಗೆ ಸಂಕೇತ ಸಂಖ್ಯೆಗಳನ್ನು ನೀಡಿ ತಂತ್ರಾಂಶ ತಯಾರಿಸಿದರು. ಇದರಿಂದಾಗಿ ಮಾಹಿತಿ ವಿನಿಮಯದ ಸಮಸ್ಯೆ ಉಂಟಾಗಿ ಬಳಕೆದಾರರಿಗೆ ತೊಡಕು ಉಂಟಾಯಿತು.

ಆರಂಭಿಕ ಕಂಪ್ಯೂಟರ್ ಬಳಕೆದಾರರು ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸುವಾಗ ಹಲವು ಸಮಸ್ಯೆಗಳನ್ನು ಎದುರಿಸಿದರು. ತಂತ್ರಾಂಶಗಳಲ್ಲಿ ಅಳವಡಿಸಲಾಗಿದ್ದ ಕೀಲಿಮಣೆ ವಿನ್ಯಾಸ ಕ್ಲಿಷ್ಟಕರವಾಗಿತ್ತು. ಕೆಲವು ತಂತ್ರಾಂಶಗಳಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಟೈಪ್‌ಮಾಡಿದರೆ ಕನ್ನಡ ಮೂಡುವಂತೆ ಕೀಲಿಮಣೆ ನೀಡಿದ್ದರು. ಮತ್ತೆ ಕೆಲವು ತಂತ್ರಾಂಶಗಳಲ್ಲಿ ಟೈಪ್‌ರೈಟರ್ ವಿನ್ಯಾಸವಿತ್ತು. ಇಂತಹ ವಿನ್ಯಾಸದಲ್ಲಿ ‘ಯೋ’ ಎಂಬ ಪೂಣಾಕ್ಷರವನ್ನು ಮೂಡಿಸಲು ಆರೇಳು ಕೀಲಿಗಳನ್ನು ಒತ್ತಬೇಕಿತ್ತು!. ಇದರಿಂದಾಗಿ ಕನ್ನಡ ಪಠ್ಯ ಬೆರಳಚ್ಚಿಸುವ ಸಮಸ್ಯೆಯಿತ್ತು. ತಂತ್ರಾಂಶಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಲವು ಕೀಲಿಮಣೆ ವಿನ್ಯಾಸಗಳನ್ನು ನೀಡಲಾಗಿತ್ತು. ಅದರಲ್ಲಿ ಯಾವುದು ತಮಗೆ ಸೂಕ್ತ ಎಂದು ಆಯ್ಕೆಮಾಡಿ ಕಲಿಯಬೇಕಿತ್ತು. ಒಂದು ತಂತ್ರಾಂಶ ಕಲಿತವರು ಮತ್ತೊಂದು ತಂತ್ರಾಂಶದಲ್ಲಿ ಟೈಪಿಂಗ್ ಮಾಡಲು ಸಾಧ್ಯವಿರಲಿಲ್ಲ ಏಕೆಂದರೆ, ಕಲಿತಿರುವ ಕೀಲಿಮಣೆ ವಿನ್ಯಾಸ ಎಲ್ಲ ತಂತ್ರಾಂಶಗಳಲ್ಲಿ ಲಭ್ಯವಿರುತ್ತಿರಲಿಲ್ಲ!. ಇನ್ನು ಮುದ್ರಣದಲ್ಲಿ ಕನ್ನಡದ ಲಿಪಿ ಸೌಂದರ್ಯ ಹೇಳಿಕೊಳ್ಳುವ ಗುಣಮಟ್ಟದಲ್ಲಿರಲಿಲ್ಲ. 9 ಪಿನ್‌ಗಳ ಡಾಟ್‌ಮ್ಯಾಟ್ರಿಕ್ಸ್ ಪ್ರಿಂಟರುಗಳು ನೀಡಿದ ಮುದ್ರಣದಲ್ಲಿ ಒತ್ತಕ್ಷರಗಳು ಕಣ್ಣಿಗೇ ಕಾಣುತ್ತಿರಲಿಲ್ಲ. ತಂತ್ರಜ್ಞಾನದ ಮುನ್ನಡೆಯ ಕಾರಣದಿಂದ ಎಲ್ಲ ಸಮಸ್ಯೆಗಳು ಇಂದು ಬಗೆಹರಿದಿದ್ದು, ಕನ್ನಡವನ್ನೂ ಸಹ ಇಂಗ್ಲಿಷ್ ನಷ್ಟೇ ಸಮರ್ಥವಾಗಿ ಕಂಪ್ಯೂಟರಿನಲ್ಲಿ ಬಳಸಬಹುದಾಗಿದೆ. ಇದನ್ನು ತಿಳಿದಿದ್ದರೂ, ಎಲ್ಲರೂ, ಎಲ್ಲೆಡೆಯಲ್ಲಿಯೂ ಕನ್ನಡವನ್ನು ಬಳಸುವ ಮನಸ್ಸು ಇಲ್ಲದಿರುವುದು ಕನ್ನಡ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದು ದುರಂತವೆಂದೇ ಹೇಳಬಹುದು. ಬಹುಮುಖ್ಯವಾಗಿ, ಕಂಪ್ಯೂಟರನ್ನು ಕನ್ನಡದಲ್ಲಿಯೇ ಬಳಸಬೇಕು ಎಂಬ ಇಚ್ಛಾಶಕ್ತಿ ಇರಬೇಕು. ಅದಿಲ್ಲದಿದ್ದರೆ, ಕನ್ನಡ ಭಾಷೆಯು ಕಂಪ್ಯೂಟರುಗಳಲ್ಲಿ ಸಮಗ್ರವಾಗಿ ಬಳಕೆಗೆ ಬರುವುದು ಕನಸಿನ ಮಾತಾಗಿಯೇ ಉಳಿಯುತ್ತದೆ ಎಂಬುದು ಅತಿಶಯೋಕ್ತಿ ಏನಲ್ಲ. ಕನ್ನಡ ಭಾಷಾ ತಂತ್ರಜ್ಞಾನ ನಡೆದು ಬಂದ ಹಾದಿಯಲ್ಲಿ ಎದುರಾದ ಸವಾಲುಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತಾಗಿ ಕುತೂಹಲಕರ ವಿಷಯಗಳನ್ನು ಇದೇ ಅಂಕಣದ ಮುಂದಿನ ಬರಹಗಳಲ್ಲಿ ಗಮನಿಸೋಣ.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News