ಹೌಸಿಂಗ್ ಸೊಸೈಟಿಗಳು ಬಾಡಿಗೆದಾರರನ್ನು ನಿರಾಕರಿಸಬಹುದೇ?

Update: 2017-10-21 11:07 GMT

ಮಹಾನಗರಗಳಲ್ಲಿ ಫ್ಲಾಟ್ ಸಂಸ್ಕೃತಿ ಬೆಳೆಯುತ್ತಲೇ ಇದೆ. ಒಂದು ಕಟ್ಟಡದಲ್ಲಿಯ ಎಲ್ಲ ಫ್ಲಾಟ್‌ಗಳ ಮಾಲಿಕರು ಸೇರಿಕೊಂಡು ಹೌಸಿಂಗ್ ಸೊಸೈಟಿಯನ್ನು ರಚಿಸಿಕೊಂಡಿ ರುತ್ತಾರೆ. ಕಟ್ಟಡದ ಸ್ವಚ್ಛತೆ ಸೇರಿದಂತೆ ಎಲ್ಲ ನಿರ್ವಹಣೆಯನ್ನು ಈ ಸೊಸೈಟಿಯೇ ನೋಡಿಕೊಳ್ಳುತ್ತದೆ. ಈ ಕಟ್ಟಡಗಳಲ್ಲಿಯ ಫ್ಲಾಟ್‌ಗಳಲ್ಲಿ ಬಾಡಿಗೆಗೆ ವಾಸವಿರುವವರು ಕೆಲವು ಅಗತ್ಯ ಮಾಹಿತಿಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.

ಬಾಡಿಗೆದಾರ ಸೊಸೈಟಿಯನ್ನು ಗಂಭೀರವಾಗಿ ಪರಿಗಣಿಸಬೇಕೇ? ಹೌದು, ಬಾಡಿಗೆದಾರ ತಾನಿರುವ ಕಟ್ಟಡದ ಸೊಸೈಟಿಯ ನಿಯಮಗಳಿಗೆ ಬದ್ಧನಾಗಿರಬೇಕಾಗುತ್ತದೆ. ಆದರೆ ಸೊಸೈಟಿಯು ಬಾಡಿಗೆದಾರನ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಬಹುಶಃ ನಿಮಗೆ ತಿಳಿದಿರದ ಕೆಲವು ಮಾಹಿತಿಗಳಿಲ್ಲಿವೆ.

ಒಬ್ಬಂಟಿಯೆಂದರೆ ದೂರದೂರ

ಒಬ್ಬಂಟಿಗರಾಗಿದ್ದರೆ ಮಹಾನಗರಗಳಲ್ಲಿ ಮನೆಯನ್ನು ಬಾಡಿಗೆಗೆ ಪಡೆಯುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಇದಕ್ಕೆ ಕಾರಣವೆಂದರೆ ಹೆಚ್ಚಿನ ಹೌಸಿಂಗ್ ಸೊಸೈಟಿಗಳು ತಮ್ಮ ಸದಸ್ಯರು ಫ್ಲಾಟ್‌ಗಳನ್ನು ಅವಿವಾಹಿತರಿಗೆ ಬಾಡಿಗೆ ನೀಡಲು ಅನುಮತಿಸುವುದಿಲ್ಲ ಎನ್ನುತ್ತಾರೆ ರಿಯಲ್ ಎಸ್ಟೇಟ್ ಪಂಡಿತರು. ಹೀಗಾಗಿ ಫ್ಲಾಟ್‌ನ ಮಾಲಿಕ ಅದನ್ನು ಅವಿವಾಹಿತರ ಗುಂಪಿಗೆ ಬಾಡಿಗೆಗೆ ಕೊಡಲು ಸಿದ್ಧನಿದ್ದರೂ ಹೌಸಿಂಗ್ ಸೊಸೈಟಿಯು ಆತನಿಗೆ ನಿರಾಕ್ಷೇಪಣ ಪ್ರಮಾಣಪತ್ರ(ಎನ್‌ಒಸಿ)ವನ್ನು ನೀಡುವುದಿಲ್ಲ.

ಅವಿವಾಹಿತರು ಸುದೀರ್ಘ ಕಾಲ ಒಂದೇ ಕಡೆಗೆ ಅಂಟಿಕೊಂಡಿರುವುದಿಲ್ಲ ಮತ್ತು ಕುಟುಂಬಗಳಿಂದ ಬರುವ ಬಾಡಿಗೆ ಆದಾಯಕ್ಕೆ ಹೋಲಿಸಿದರೆ ಅವರ ಬಾಡಿಗೆ ಆದಾಯ ಸ್ಥಿರವಾಗಿರುವುದಿಲ್ಲ ಎನ್ನುವುದೂ ಅವರಿಗೆ ಸುಲಭದಲ್ಲಿ ವಸತಿ ಸಿಗದಿರಲು ಕಾರಣವಾಗಿದೆ.

ಹೌಸಿಂಗ್ ಸೊಸೈಟಿಗಳು ತಮ್ಮದೇ ಕಾನೂನು ಹೊಂದಬಹುದೇ?

ಕಾನೂನು ತಜ್ಞರು ಹೇಳುವುದನ್ನು ನಂಬಬಹುದಾದರೆ ಹೌಸಿಂಗ್ ಸೊಸೈಟಿಗಳು ತಮ್ಮದೇ ಆದ ಕಾನೂನುಗಳನ್ನು ರಚಿಸಿಕೊಳ್ಳಬಹುದು. ಪ್ರತಿ ಹೌಸಿಂಗ್ ಸೊಸೈಟಿಯೂ ನೋಂದಣಿಯಾಗುವಾಗ ವ್ಯಾಪಕ ಮಾರ್ಗಸೂಚಿಗಳು ಅಥವಾ ಬೈ-ಲಾಗಳನ್ನು ಅಳವಡಿಸಿ ಕೊಂಡಿರುತ್ತದೆ. ಈ ನಿಯಮಗಳು ಸೊಸೈಟಿಯ ದಿನನಿತ್ಯದ ಕಾರ್ಯ ನಿರ್ವಹಣೆಯ ಮೇಲೆ ಹತೋಟಿಯನ್ನು ಹೊಂದಿರುತ್ತವೆ ಮತ್ತು ಅದರ ಸುಗಮ ಆಡಳಿತದಲ್ಲಿ ನಿರ್ಣಾಯಕವಾಗಿವೆ.

ಈ ಕಾನೂನುಗಳಿಗೆ ಬಲವಿದೆಯೇ?

ಸೊಸೈಟಿಯ ನಿಯಮಗಳು ಸಾಮಾನ್ಯವಾಗಿ ಕೇಂದ್ರ ಕಾಯ್ದೆಯಾಗಿರುವ ಸಹಕಾರಿ ಸಂಘಗಳ ಕಾಯ್ದೆಯಡಿ ರೂಪುಗೊಂಡಿರುತ್ತವೆ. ಸೊಸೈಟಿಗಳು ತಮ್ಮದೇ ಆದ ನಿಬಂಧನೆಗಳನ್ನು ಸೇರಿಸಲೂ ಈ ಕಾಯ್ದೆಯು ಅವಕಾಶ ನೀಡುತ್ತದೆ ಎನ್ನುತ್ತಾರೆ ತಜ್ಞರು.

ಉದಾಹರಣೆಗೆ ಹೌಸಿಂಗ್ ಸೊಸೈಟಿಯೊಂದು ಬಾಡಿಗೆದಾರರಿಗಾಗಿ ನಿಯಮ ವೊಂದನ್ನು ರೂಪಿಸಿದೆ ಮತ್ತು ಇದರನ್ವಯ ಬಾಡಿಗೆದಾರನು ತನ್ನ ವಾಹನವನ್ನು ಸೊಸೈಟಿಯ ಸದಸ್ಯರಿಗೆ ನಿಗದಿ ಮಾಡಲಾಗಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತಿಲ್ಲ ಎಂದಿಟ್ಟುಕೊಳ್ಳೋಣ. ಇಂತಹ ಸಂದರ್ಭದಲ್ಲಿ ಈ ನಿಯಮವನ್ನು ಜಾರಿಗೊಳಿಸಲು ಸೊಸೈಟಿಯು ಎಲ್ಲ ಹಕ್ಕುಗಳನ್ನೂ ಹೊಂದಿರುತ್ತದೆ.

ಹೌಸಿಂಗ್ ಸೊಸೈಟಿ ಫ್ಲಾಟ್ ಮಾಲಿಕನನ್ನು ಧಿಕ್ಕರಿಸಬಹುದೇ?

 ತನ್ನ ಫ್ಲಾಟ್‌ನ್ನು ಬಾಡಿಗೆಗೆ ನೀಡುವುದು ಮಾಲಿಕನ ಕಾನೂನುಬದ್ಧ ಹಕ್ಕು ಆಗಿದ್ದರೂ ಹೌಸಿಂಗ್ ಸೊಸೈಟಿಗೂ ಆ ವಿಷಯದಲ್ಲಿ ಮಾತನಾಡುವ ಹಕ್ಕಿದೆ. ಸೊಸೈಟಿಗಳು ತಮ್ಮ ಬೈ-ಲಾಗಳ ಆಧಾರದಲ್ಲಿ ಫ್ಲಾಟ್‌ನ್ನು ಬಾಡಿಗೆಗೆ ನೀಡುವುದಕ್ಕೆ ಅನುಮತಿಸದಿರಲು ಕಾನೂನಿನ ಬಲವನ್ನು ಹೊಂದಿವೆ ಎನ್ನುತ್ತಾರೆ ತಜ್ಞರು. ಹೆಚ್ಚಿನ ಪ್ರಕರಣಗಳಲ್ಲಿ ಇದನ್ನು ಸಾಧಿಸಲು ಇಂತಹ ಬೈ-ಲಾಗಳನ್ನು ನಿರ್ದಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಆದರೆ ಹಾಗೆ ಮಾಡಲು ಸೊಸೈಟಿಗಳಿಗೆ ಯಾವುದೇ ಸಾಂವಿಧಾನಿಕ ಹಕ್ಕು ಇಲ್ಲ.

ಫ್ಲಾಟ್ ಮಾಲಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸಬಹುದೇ?

ಹೌಸಿಂಗ್ ಸೊಸೈಟಿಗಳು ತಮ್ಮ ಫ್ಲಾಟ್‌ಗಳನ್ನು ಬಾಡಿಗೆಗೆ ನೀಡಿರುವ ಮಾಲಿಕರಿಗೆ ಹೆಚ್ಚುವರಿ ನಿರ್ವಹಣಾ ಶುಲ್ಕವನ್ನು ವಿಧಿಸಲು ಸೊಸೈಟಿಗಳ ಕಾಯ್ದೆಯಡಿ ಅವಕಾಶವಿದೆ.

ಬೈ-ಲಾಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೇ?

ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುವ ಯಾವುದೇ ನಿಯಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎನ್ನುತ್ತಾರೆ ತಜ್ಞರು. ಹೌಸಿಂಗ್ ಸೊಸೈಟಿಯ ನಿಯಮಗಳು ಕಾನೂನಿನ ಸ್ಥಾನಮಾನವನ್ನು ಹೊಂದಿರುವುದಿಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಕ್ಕನ್ನು ಹೊಂದಿದ್ದಾನೆ ಮತ್ತು ಧರ್ಮ, ಜಾತಿ, ಲಿಂಗ, ಆಹಾರ ಕ್ರಮ ಅಥವಾ ವೈವಾಹಿಕ ಸ್ಥಿತಿಗತಿಯ ಆಧಾರದಲ್ಲಿ ಆತನ ವಿರುದ್ಧ ತಾರತಮ್ಯಕ್ಕೆ ಅವಕಾಶವಿಲ್ಲ.

ಬಾಡಿಗೆದಾರ ಸೊಸೈಟಿಯ ವಿರುದ್ಧ ಕ್ರಮ ಕೈಗೊಳ್ಳಬಹುದೇ?

ಸೊಸೈಟಿಯು ತನ್ನೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಬಾಡಿಗೆದಾರ ಭಾವಿಸಿದರೆ ಓರ್ವ ಪ್ರಜೆಯಾಗಿ ತನ್ನ ಹಕ್ಕನ್ನು ಅತಿಕ್ರಮಿಸಲಾಗಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಬಹುದು. ಮಾಲಿಕ ಕೂಡ ಸಿವಿಲ್ ಅಥವಾ ಸಹಕಾರಿ ನ್ಯಾಯಾಲಯದಲ್ಲಿ ಸೊಸೈಟಿಯ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು. ಆತ ಹೌಸಿಂಗ್ ಸೊಸೈಟಿಗಳ ಉಪ ನೋಂದಣಾಧಿಕಾರಿಗಳಿಗೆ ಮೇಲ್ಮನವಿಯನ್ನೂ ಸಲ್ಲಿಸಬ ಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News