ಪಾಂಟಿಂಗ್ ಶತಕದ ದಾಖಲೆ ಹಿಂದಿಕ್ಕಿದ ಕೊಹ್ಲಿ

Update: 2017-10-22 12:14 GMT

ಮುಂಬೈ, ಅ.22: ನ್ಯೂಝಿಲೆಂಡ್ ವಿರುದ್ಧ ರವಿವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿ 31ನೆ ಶತಕ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಗರಿಷ್ಠ ಶತಕದ ದಾಖಲೆಯನ್ನು(30) ಹಿಂದಿಕ್ಕಿದ್ದಾರೆ.

200ನೆ ಏಕದಿನ ಪಂದ್ಯವನ್ನಾಡಿರುವ ಕೊಹ್ಲಿ 44.3 ಓವರ್‌ನಲ್ಲಿ ಟಿಮ್ ಸೌಥಿ ಎಸೆತದಲ್ಲಿ ಒಂದು ರನ್ ಗಳಿಸಿ ಶತಕ ಪೂರೈಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಕೊಹ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವ ಆಟಗಾರರ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಒಟ್ಟು 49 ಶತಕಗಳನ್ನು ಬಾರಿಸುವುದರೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅತ್ಯಂತ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿರುವ ಕೊಹ್ಲಿ 111 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಕೊಹ್ಲಿ ಈ ವರ್ಷ ದಾಖಲಿಸಿದ 5ನೆ ಶತಕ ಇದಾಗಿದೆ.

ಕೊಹ್ಲಿ 200ನೆ ಪಂದ್ಯದ ಮೈಲುಗಲ್ಲು ತಲುಪಿರುವ ಭಾರತದ 14ನೆ ಹಾಗೂ ವಿಶ್ವದ 72ನೆ ಆಟಗಾರನಾಗಿದ್ದಾರೆ. 200ನೆ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ ಎರಡನೆ ಬ್ಯಾಟ್ಸ್‌ಮನ್ ಕೊಹ್ಲಿ. ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಈ ಸಾಧನೆ ಮಾಡಿದ ಮೊದಲಿಗ.

ಶಿಖರ್ ಧವನ್ ಔಟಾದಾಗ ಕೊಹ್ಲಿ ಕ್ರೀಸ್‌ಗೆ ಇಳಿದರು. ಭಾರತ 71 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ತಂಡವನ್ನು ಆಧರಿಸಿದ ಕೊಹ್ಲಿ 4ನೆ ವಿಕೆಟ್‌ಗೆ ದಿನೇಶ್ ಕಾರ್ತಿಕ್‌ರೊಂದಿಗೆ 73 ರನ್ ಹಾಗೂ ಎಂ.ಎಸ್. ಧೋನಿಯೊಂದಿಗೆ 57 ರನ್ ಜೊತೆಯಾಟ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News