ಸ್ಯಾಕ್ಸೋಫೋನ್ ಕಲಾವಿದ ಓಬು ಸೇರಿಗಾರ

Update: 2017-10-22 13:20 GMT

ಉಡುಪಿ, ಅ. 22: ಕರಾವಳಿ ಜಿಲ್ಲೆಗಳ ಹಿರಿಯ ನಾಗಸ್ವರ ಸ್ಯಾಕ್ಸೋಫೋನ್ ಕಲಾವಿದ, ಗುರು ಓಬು ಸೇರಿಗಾರ(83) ಶನಿವಾರ ರಾತ್ರಿ ನಿಧನರಾದರು.
ಉಡುಪಿಯ ಕೃಷ್ಣ ಮಠದಲ್ಲಿ 50 ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಓಬು ಸೇರಿಗಾರ್, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮ ಕಲಾಸೇವೆ ಸಲ್ಲಿಸಿದ್ದರು.

ಉಡುಪಿಯ ಅನಂತ ಸೇರಿಗಾರ್ ಅವರಲ್ಲಿ ವಾದ್ಯ ಸಂಗೀತ ಶಿಕ್ಷಣ ಪಡೆದ ಓಬು ಸೇರಿಗಾರ್, ಪುತ್ತೂರಿನ ಡೋಗ್ರ ಸೇರಿಗಾರರಲ್ಲಿ ಸ್ಯಾಕ್ಸೋಫೋನ್ ಶಿಕ್ಷಣ ಪಡೆದರು. ತಮ್ಮ ಶುದ್ಧ, ಸಂಪ್ರದಾಯ ಬದ್ಧ ನಾಗಸ್ವರ ಸ್ಯಾಕ್ಸೋಫೋನ್ ವಾದನ ದಿಂದ ಅವರು ಪ್ರಸಿದ್ಧರಾಗಿದ್ದರು.

ಸುಮಾರು 160 ಕ್ಕಿಂತಲೂ ಅಧಿಕ ಶಿಷ್ಯರಿಗೆ ವಾದ್ಯವಿದ್ಯೆಯನ್ನು ಶ್ರದ್ಧೆಯಿಂದ ಧಾರೆಯೆರೆದು ಕರಾವಳಿ ಜಿಲ್ಲೆಗಳಲ್ಲಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದ್ದರು. ಅವರನ್ನು ಸಂಸ್ಕಾರ ಭಾರತಿ ಉಡುಪಿ, ಕಲಾವೃಂದ, ರಾಗಧನ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸನ್ಮಾನಿಸಿದ್ದವು. ಸಾರ್ವಜನಿಕರು ಮತ್ತು ಅವರ ಶಿಷ್ಯರು 2008ರಲ್ಲಿ ಉಡುಪಿ ರಥಬೀದಿಯಲ್ಲಿ ಅವರನ್ನು ಅಭಿನಂದಿಸಿ ಗೌರವಿಸಿದ್ದರು. ಮೃತರರು ಪತ್ನಿ, ಪುತ್ರಿ ಮತ್ತು ಅಪಾರ ಶಿಷ್ಯವೃಂದ ವನ್ನು ಅಗಲಿದ್ದಾರೆ.

ಸಂತಾಪ: ಓಬು ಸೇರಿಗಾರ ನಿಧನಕ್ಕೆ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಅದಮಾರು, ಫಲಿಮಾರು, ಪುತ್ತಿಗೆ, ಶೀರೂರು, ಕಾಣಿಯೂರು, ಸೋದೆ ಸ್ವಾಮೀಜಿಗಳು, ಸಂಸ್ಕಾರ ಭಾರತಿ, ಯಕ್ಷಗಾನ ಕಲಾರಂಗ, ರಾಗಧನ ಉಡುಪಿಯ ದೇವಾಡಿಗರ ಸಮಾಜ ಸೇವಾ ಸಂಘ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ ರಘುಪತಿ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ