×
Ad

ಮೀಸಲಾತಿಯ ಮೂಲ ಪ್ರೇರಣೆ 'ಟಿಪ್ಪು ಸುಲ್ತಾನ್': ಡಾ.ಸಿ.ಎಸ್.ದ್ವಾರಕನಾಥ್

Update: 2017-10-22 19:35 IST

ಬೆಂಗಳೂರು, ಅ.22: ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಆಳ್ವಿಕೆಯಲ್ಲಿ ಮೀಸಲಾತಿಯನ್ನು ಜಾರಿಮಾಡಿದ ಸಾಹು ಮಹಾರಾಜರು, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಮಾತ್ರ ಜ್ಞಾಪಿಸಿಕೊಳ್ಳುತ್ತೇವೆ. ಆದರೆ, ಇವರಿಗೆ ಮೂಲ ಪ್ರೇರಣೆ ನೀಡಿದವರು ಮೈಸೂರಿನ ಟಿಪ್ಪು ಸುಲ್ತಾನ್ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ತಿಳಿಸಿದ್ದಾರೆ.

ರವಿವಾರ ಭಡ್ತಿ ಮೀಸಲಾತಿ ಸಂರಕ್ಷಣಾ ಸಮಿತಿ ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ‘ಮೀಸಲಾತಿ ಮತ್ತು ಭಡ್ತಿ ಮೀಸಲಾತಿ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅರ್ಹತೆ, ಪ್ರತಿಭೆಯಿದ್ದರೂ ಅವಕಾಶದಿಂದ ವಂಚಿತರಾಗಿದ್ದ ಜನತೆಯ ಕುರಿತು ಟಿಪ್ಪು ಸುಲ್ತಾನ್‌ಗೆ ವಿಶೇಷ ಪ್ರೀತಿ, ಕಾಳಜಿ ಇತ್ತೆಂದು ಹೇಳಿದರು.

ಮೈಸೂರು ಪ್ರಾಂತದ ಅಧಿಕಾರವನ್ನು ಹೈದರಾಲಿಯಿಂದ ಟಿಪ್ಪುವಿಗೆ ಹಸ್ತಾಂತರ ವಾಗುತ್ತಿದ್ದಂತೆ ಹೊಸ ಮನ್ವಂತರಕ್ಕೆ ಸಾಕ್ಷಿಯಾಯಿತು. ಕನ್ನಡ, ಇಂಗ್ಲಿಷ್, ಪರ್ಶಿಯಾ, ಉರ್ದು ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಟಿಪ್ಪು, ದೇಶದಲ್ಲಿದ್ದ ಸಾಮಾಜಿಕ ಶೋಷಣೆ ಕುರಿತು ಸಾಕಷ್ಟು ತಿಳುವಳಿಕೆ ಹೊಂದಿದ್ದರು. ಹೀಗಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ದಲಿತ ವರ್ಗದವರಿಗೆ ತನ್ನ ಸೈನ್ಯದಲ್ಲಿ ಹೆಚ್ಚಿನ ಸ್ಥಾನಮಾನ ದೊರಕಿಸಿಕೊಟ್ಟರು ಎಂದು ವಿವರಿಸಿದರು.

ಟಿಪ್ಪು ಸುಲ್ತಾನ್‌ನ ಹಾದಿಯಾಗಿ ಜ್ಯೋತಿ ಬಾಪುಲೆ, ಸಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಜಾರಿ ಮಾಡಿ ದೇಶವನ್ನು ಸಮಾನತೆ ಹಾಗೂ ಮಾನವೀಯತೆಯ ಪಥದಲ್ಲಿ ಕೊಂಡೊಯ್ಯುಲು ಪ್ರಮುಖ ಕಾರಣರಾದರು. ಆದರೆ, ಪ್ರಸ್ತುತ ಸಮಾಜದಲ್ಲಿ ಮನುವಾದಿಗಳ ಅಧಿಪತ್ಯ ಹೆಚ್ಚಾಗಿರುವುದರಿಂದ ಮೀಸಲಾತಿಗೆ ದೊಡ್ಡ ಕಂಟಕಪ್ರಾಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News