ಸಂಕುಚಿತ ಮನಸ್ಥಿತಿಯುಳ್ಳವರ ಸಂಖ್ಯೆ ಹೆಚ್ಚುತ್ತಿದೆ: ವಿ.ಎಸ್.ಉಗ್ರಪ್ಪ

Update: 2017-10-22 14:15 GMT

ಬೆಂಗಳೂರು, ಅ.22: ಇತ್ತೀಚಿನ ದಿನಗಳಲ್ಲಿ ಜಾತಿ, ಮತ, ಧರ್ಮ ಹಾಗೂ ಭಾಷೆಯ ಕಾರಣಗಳಿಂದ ಸಂಕುಚಿತ ಮನಸ್ಥಿತಿಯುಳ್ಳವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ವಾಲ್ಮೀಕಿ ಎಜುಕೇಶನ್ ಮತ್ತು ಸ್ಕಾಲರ್‌ಶಿಪ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜವನ್ನು ಗೌರವಿಸುವ, ಎಲ್ಲರನ್ನೂ ಸಮಾನವಾಗಿ ಕಾಣುವ ಸಮಾಜ ನಿರ್ಮಾಣವಾಗಬೇಕಿದೆ. ಆದರೆ, ಜಾತಿ, ಧರ್ಮದ ಹೆಸರಿನಲ್ಲಿ ದೂರಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ವಿಶಾಲವಾಗಿ ಯೋಚಿಸುವಂತಹ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು.

ಶಿಕ್ಷಣ ಎಂಬುದು ಕೇವಲ ಅಂಕಗಳಿಗೆ ಸೀಮಿತವಾಗಬಾರದು. ವಿದ್ಯೆ ಸರ್ವಕಾಲಿಕ ಸಂಪತ್ತು. ಅದನ್ನು ಸಮಾಜವನ್ನು ಕಟ್ಟುವುದಕ್ಕೆ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸಾಮಾಜಿಕ ಶಿಕ್ಷಣ ನೀಡಬೇಕು ಎಂದ ಅವರು, ಸಮಾಜವನ್ನು ಗೌರವಿಸುವುದನ್ನು ಕಲಿಸುವುದು ನಿಜವಾದ ವಿದ್ಯೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯ, ಜಾತ್ಯಾತೀತ ವ್ಯವಸ್ಥೆಗೆ ಒತ್ತು ನೀಡಬೇಕು ಎಂದ ಉಗ್ರಪ್ಪ, ಸಮಾಜದಲ್ಲಿ ಹಲವರು ಪಡೆಯುತ್ತಾರೆ. ಆದರೆ, ತಮ್ಮ ಹಿಂದಿನ ಸ್ಥಿತಿಯನ್ನು ನೆನಪಿಸಿಕೊಂಡು, ಈ ಸಮಾಜದಲ್ಲಿ ನನ್ನ ಹಾಗೆ ಬೇರೆ ಯಾರೂ ಇರಬಾರದು ಎಂಬ ಉದ್ದೇಶದಿಂದ ಸಹಾಯ ಮಾಡುವವರು ಅತ್ಯಂತ ವಿರಳ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಅನೇಕ ಟ್ರಸ್ಟ್‌ಗಳಿವೆ. ಅವೆಲ್ಲವೂ, ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ, ಜನರಿಗೆ ಮಾತ್ರ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹರ್ಷಿ ವಾಲ್ಮೀಕಿ ನಿಜವಾದ ಮಾನವೀಯ ಮೌಲ್ಯಗಳನ್ನು ಈ ಸಮಾಜಕ್ಕೆ ಸಾರಿ ಹೇಳಿದ್ದಾರೆ. ಅವರು ಕೆಟ್ಟವರು ಆಗಿರಲಿಲ್ಲ. ಹೀಗಾಗಿ, ಬದುಕಿನಲ್ಲಿ ಪ್ರತಿಯೊಬ್ಬರೂ ವಾಲ್ಮೀಕಿಯನ್ನು ಆದರ್ಶವನ್ನಾಗಿ ಮಾಡಿಕೊಂಡು, ಅವರು ಅನುಸರಿದ ದಾರಿಯಲ್ಲಿ ನಡೆಯಬೇಕಿದೆ. ವಿಶಾಲವಾದ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಕಮಲಾ ಹಂಪನ ಮಾತನಾಡಿ, ಹಿಂದುಳಿದ ಸಮುದಾಯಕ್ಕೆ ಅನೇಕ ಸವಾಲುಗಳು ಎದುರಾಗುತ್ತದೆ. ಅವೆಲ್ಲವನ್ನೂ ಪ್ರತಿಯೊಬ್ಬರೂ ಎದುರಿಸಬೇಕು. ಸವಾಲುಗಳು ಸ್ವೀಕರಿಸಬೇಕು. ಆಗ ಮಾತ್ರ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಇಲ್ಲದಿದ್ದರೆ, ಬಲಿಷ್ಟರು ನಮ್ಮನ್ನು ಬೆಳೆಯಲು ಬಿಡುವುದಿಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.

ನಾನು 1985 ರಲ್ಲಿ ಎಂಎ ಪದವಿ ಪಡೆಯಲು ಕಾಲೇಜಿಗೆ ಹೋಗಬೇಕಾದ ಸಂದರ್ಭದಲ್ಲಿ ಲಿಂಗಾಯತರು ಮತ್ತು ಬ್ರಾಹ್ಮಣರು ಈ ದಲಿತ ಹೆಣ್ಣು ಮಗಳು ಕಾಲೇಜಿಗೆ ಹೋಗಿ ಏನು ಸಾಧನೆ ಮಾಡುತ್ತಾಳೆ ಎಂದು ವ್ಯಂಗವಾಡುತ್ತಿದ್ದರು. ಆದರೆ, ಅದನ್ನು ನಾನು ಲೆಕ್ಕಿಸಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ, ಮುನ್ನಡೆದೆ. ಅನಂತರ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿದೆ ಎಂದು ತಮ್ಮ ಅನುಭವ ಹಂಚಿಕೊಂಡ ಅವರು, ನೀವು ಇದೇ ರೀತಿಯಾದ ಸವಾಲುಗಳು ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ರಂಗಯ್ಯ ಮಾತನಾಡಿ, ವಾಲ್ಮೀಕಿ ಎಜುಕೇಶನ್ ಮತ್ತು ಸ್ಕಾಲರ್‌ಶಿಪ್ ಟ್ರಸ್ಟ್ ಅನ್ನು ಕಳೆದ 15 ವರ್ಷಗಳಿಂದ ನಡೆಸುತ್ತಿದ್ದೇವೆ. ಆದರೆ, ಕಳೆದ 10 ವರ್ಷಗಳಿಂದ ಸಮಾಜದ ಎಲ್ಲ ಜಾತಿ, ಧರ್ಮದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪುರಸ್ಕಾರ ನೀಡುತ್ತಿದ್ದೇವೆ. ಮೊದಲಿಗೆ 5 ಸಾವಿರ, 10 ಸಾವಿರ ನೀಡುತ್ತಿದ್ದೆವು. ಈ ಬಾರಿ ಪ್ರತಿ ಪ್ರತಿಭಾವನ್ವಿತರಿಗೆ 20 ಸಾವಿರ ರೂ. ನೀಡುತ್ತಿದ್ದೇವೆ. ಇದುವರೆಗೂ 250 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು, ಈ ಬಾರಿ 25 ಜನರಿಗೆ ಪುರಸ್ಕಾರ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಐಬಿಎಂ ಗ್ಲೋಬಲ್ ಮಾರ್ಕೆಟಿಂಗ್‌ನ ಕಾರ್ಯ ನಿರ್ವಾಹಕ ಪಾಲುದಾರ ಚೈತನ್ಯ ಪ್ರಕಾಶ್ ರಂಗಯ್ಯ, ಟ್ರಸ್ಟ್‌ನ ಕಾರ್ಯದರ್ಶಿ ಆರ್.ಎಂ.ಆರ್. ನಾಯಕ, ಟ್ರಸ್ಟಿಗಳಾದ ಹರ್ತಿಕೋಟೆ ವೀರೇಂದ್ರಸಿಂಹ, ಪ್ರೊ.ಜಿ.ಶರಣಪ್ಪ, ವೀರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News