ಬೆಂಗಳೂರು ನಗರದ ಪ್ರವಾಸಿ ತಾಣ ವೀಕ್ಷಿಸಲು ಬಾಡಿಗೆ ಸೈಕಲ್ ವ್ಯವಸ್ಥೆ !

Update: 2017-10-22 14:31 GMT

ಬೆಂಗಳೂರು, ಅ.22: ಬೆಂಗಳೂರು ನಗರದ ಬಹು ಆಕರ್ಷಿತ ಉದ್ಯಾನವನ ಕಬ್ಬನ್‌ ಪಾರ್ಕ್ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಸಲುವಾಗಿ ಬಾಡಿಗೆ ಸೈಕಲ್ ಯೋಜನೆಯನ್ನು ಪ್ರಾರಂಭಿಸಲು ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಮುಂದಾಗಿವೆ.

ಉದ್ಯಾನದ ಸುತ್ತಮುತ್ತಲಿನ ಪ್ರಾರಂಪರಿಕ ಹಾಗೂ ಐತಿಹಾಸಿಕ ಕಟ್ಟಡಗಳ ವಿವರವನ್ನು ನೀಡಿ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಈ ಯೋಜನೆಯನ್ನು ಪರಿಚಯಿಸುತ್ತಿದ್ದು, ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಎಂಬ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬಾಡಿಗೆಗೆ ಸೈಕಲ್ ಯೋಜನೆ ಜಾರಿಗೆ ಮುಂದಾಗಿದ್ದು, ಈ ತಿಂಗಳ ಕೊನೆ ವಾರದಲ್ಲಿ ಚಾಲನೆ ಸಿಗಲಿದೆ.

ಕಬ್ಬನ್‌ ಪಾರ್ಕ್ ಸುತ್ತಲು ಐತಿಹಾಸಿಕ ಕಟ್ಟಡಗಳು ಪ್ರವಾಸಿಗರಿಗೆ ಸೈಕಲ್ ಸವಾರಿ ನಡೆಸುವ ಮೂಲಕ ಪರಚಯಿಸಬೇಕು ಎಂಬ ಉದ್ದೇಶದಿಂದ ಕಬ್ಬನ್ ಪಾರ್ಕ್‌ನಲ್ಲಿ ಬಾಡಿಗೆಗೆ ಸೈಕಲ್ ನೀಡುವ ಕಾರ್ಯಕ್ರಮ ಪ್ರಾರಂಭಿಸಬೇಕು ಎಂದು ಬೆಂಗಳೂರು ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ಹಲವು ಬಾರಿ ಸಲಹೆಗಳನ್ನು ನೀಡಿದೆ. ಈ ಸಲಹೆಗಳನ್ನು ಆಧರಿಸಿ ಯೋಜನೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಬ್ಬನ್‌ ಪಾರ್ಕ್ ಸುತ್ತಮುತ್ತ ಸುಮಾರು 10ಕ್ಕೂ ಹೆಚ್ಚು ಪುರಾತನ ಕಟ್ಟಡಗಳು ಮತ್ತು ಸ್ಮಾರಕಗಳಿವೆ. ಜೊತೆಗೆ ಸುಮಾರು ಎಂಟು ವಿವಿಧ ಮ್ಯೂಸಿಯಂಗಳಿವೆ. ಬಾಡಿಗೆ ಸೈಕಲ್‌ನಲ್ಲಿ ಇವುಗಳನ್ನು ವೀಕ್ಷಿಸಬಹುದಾಗಿದೆ. ಈ ಕಟ್ಟಡಗಳ ಬಗ್ಗೆ ಮಾಹಿತಿ, ವಿವರ ಪಡೆಯುವ ಸಂಬಂಧ ನೂತನ ಮೊಬೈಲ್ ಆ್ಯಪ್‌ ಪರಿಚಿಸಲಾಗಿದ್ದು, ಅದರ ಮೂಲಕ ಕಟ್ಟಡಗಳ ಕುರಿತು ಎಲ್ಲಾ ವಿವರಗಳನ್ನು ಒದಗಿಸಲಾಗುವುದು. ಅಲ್ಲದೆ, ಈ ಆ್ಯಪ್‌ ನಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ವಿವರವನ್ನು ಧ್ವನಿ ಸುರುಳಿಯ ಮೂಲಕ ವಿವರಣೆ ಒದಗಿಸಲಾಗುವುದು ಎಂದು ವಿವರಿಸಿದ್ದಾರೆ.

ಕಬ್ಬನ್ ಪಾರ್ಕ್‌ನ ನಾಲ್ಕು ದ್ವಾರಗಳಲ್ಲಿ ಸೈಕಲ್ ಸ್ಟಾಂಡ್‌ಗಳನ್ನು ಪ್ರಾರಂಭಿಸುತ್ತಿದ್ದು, ಪ್ರತಿ ದ್ವಾರದಲ್ಲಿಯೂ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ 25ರಂತೆ ಒಟ್ಟು 100 ಸೈಕಲ್‌ಗಳನ್ನು ಇಡಲಾಗುವುದು. ಸರಕಾರದಿಂದ ನೀಡಿರುವ ಯಾವುದಾದರೂ ಗುರುತಿನ ಚೀಟಿ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಪ್ರವಾಸಿಗರಿಗೆ ಸೈಕಲ್‌ಗಳನ್ನು ಬಾಡಿಗೆಗೆ ನೀಡಲಾಗುವುದು. ಅಲ್ಲದೆ, ಸಣ್ಣ ಮಕ್ಕಳಿಗಾಗಿ ಪ್ರತ್ಯೇಕ ಸೈಕಲ್‌ಗಳನ್ನು ಒದಗಿಸಲಾಗುವುದು ಎಂದು ನಮ್ಮ ನಿಮ್ಮ ಸೈಕ್ ಫೌಂಡೇಶನ್ ಪ್ರತಿನಿಧಿ ವಿವರಿಸಿದ್ದಾರೆ.

ಬೆಂಗಳೂರು ಅರಮನೆ, ಬೆಂಗಳೂರು ಕೋಟೆ, ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ, ವೆಂಕಟಪ್ಪ ಆರ್ಟ್ ಗ್ಯಾಲರಿ, ವಿಧಾನಸೌಧ, ಹೈಕೋರ್ಟ್, ಟ್ರಿನಿಟಿ ಚರ್ಚ್, ಸೇಂಟ್ ಪ್ರಾಟ್ರಿಕ್ ಚರ್ಚ್, ಹಡ್ಸನ್ ಚರ್ಚ್, ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿ ಇನ್ನು ಹಲವು ಆಕರ್ಷಕ ಕಟ್ಟಡಗಳಿದ್ದು, ಅವುಗಳ ವೀಕ್ಷಣೆಗೆ ಸೈಕಲ್ ಸಹಕಾರಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News