ಕಟ್ಟಡ ಕಾರ್ಮಿಕರ ಮಂಡಳಿಯ ಸೆಸ್ ಹಣ ಬಿಡುಗಡೆಗೆ ಆಗ್ರಹ

Update: 2017-10-22 14:38 GMT

ಬೆಂಗಳೂರು, ಅ.22: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಸುಮಾರು 5,500 ಕೋಟಿ ರೂ. ಸೆಸ್ ಹಣವನ್ನು ಕೂಡಲೇ ಕಟ್ಟಡ ಕಾರ್ಮಿಕರ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಮಿಕ ವಿಭಾಗ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ಆಗ್ರಹಿಸಿದ್ದಾರೆ.

ರವಿವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾರ್ಮಿಕ ವಿಭಾಗದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹವಾಗಿರುವ ಸುಮಾರು 5,500 ಕೋಟಿ ರೂ. ಸೆಸ್ ಹಣವನ್ನು ಬಿಡುಗಡೆಗೊಳಿಸಬೇಕು. ನಗರದಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರಲ್ಲಿ ಬಹುಪಾಲು ಕಾರ್ಮಿಕರು ವಸತಿ ಹೀನರು. ಇವರಿಗೆ ಸೂಕ್ತ ಆಶ್ರಯ ಕಲ್ಪಿಸಲು ಸಂಗ್ರಹವಾಗಿರುವ ಸೆಸ್‌ ಹಣವನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ನಿವೃತ್ತಿ ವಯಸ್ಸಿನ ಮಿತಿಯನ್ನು 58ರಿಂದ 60ಕ್ಕೆ ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಖಾಸಗಿ ಸಂಸ್ಥೆಗಳು ಪಾಲಿಸಬೇಕು ಎಂದರು.

ಕಾರ್ಮಿಕರಿಗೆ ಅನ್ಯಾಯ: ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮತ್ತು ಏಕರೂಪ ತೆರಿಗೆ ವ್ಯವಸ್ಥೆಯಿಂದ ಕಾರ್ಮಿಕ ವರ್ಗಕ್ಕೆ ಅನ್ಯಾಯವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಕಾರ್ಮಿಕ ಸಮುದಾಯಕ್ಕೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪದೇ ಪದೇ ಕಾರ್ಮಿಕ ವಿರೋಧಿ ನಡೆಯನ್ನು ತಾಳುತ್ತಿರುವುದರಿಂದ ಕಾರ್ಮಿಕರಿಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮನೆ ಮನೆಗೆ ಕಾಂಗ್ರೆಸ್ ಅಭಿಯಾನ: ಕೆಪಿಸಿಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಮನೆ ಮನೆಗೆ ಕಾಂಗ್ರೆಸ್ ಅಭಿಯಾನದ ಮೂಲಕ ರಾಜ್ಯ ಸರಕಾರದ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಡೆಸಲಾಗುವುದು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಹಗಲು ರಾತ್ರಿ ಶ್ರಮಿಸಬೇಕು ಎಂದು ಪ್ರಕಾಶಂ ಕರೆ ನೀಡಿದರು.

ಸಭೆಯಲ್ಲಿ ಬಿಬಿಎಂಪಿ ಮೇಯರ್ ಸಂಪತ್, ಕೆಪಿಸಿಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News