ಬೆಂಗಳೂರು: ಸಂಚಾರ ದಟ್ಟಣೆ ತಗ್ಗಿಸಲು ಮಸೀದಿ ಮಿನರ್ ತೆರವುಗೊಳಿಸಿದ ಮುಸ್ಲಿಮರು

Update: 2017-10-22 18:01 GMT

ಬೆಂಗಳೂರು, ಅ.22: ನಗರದ ಹೊಸೂರು ಮುಖ್ಯರಸ್ತೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಶಿಯಾ ಮುಸ್ಲಿಮರು ತಮ್ಮ ಮಸೀದಿಯ ಮಿನರ್ ಹಾಗೂ ಕಾಂಪೌಂಡ್ ಗೋಡೆಯನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ರವಿವಾರ ಇಲ್ಲಿನ ಹೊಸೂರು ರಸ್ತೆ ಅಗಲೀಕರಣಕ್ಕಾಗಿ ಶಿಯಾ ಮಸೀದಿಗೆ ಸೇರಿದ ಜಾಗ ನೀಡಲು ಮಜೀದ್ ಇ ಅಸ್ಕರಿ ಮತ್ತು ಖಬರಸ್ತಾನ್ ಮ್ಯಾನೇಜಿಂಗ್ ಕಮಿಟಿ ಒಪ್ಪಿರುವ ಹಿನ್ನೆಲೆಯಲ್ಲಿ ಮಸೀದಿಯ ಕಾಂಪೌಂಡ್ ತೆರವು ಮಾಡಲಾಯಿತು.

ನಗರದ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆಯ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣದಿಂದಾಗಿ ಜಾಗ ಬಿಟ್ಟುಕೊಡುವಂತೆ ಬಿಬಿಎಂಪಿ ಈ ಹಿಂದೆ ಸಮಿತಿಯನ್ನು ಕೋರಿತ್ತು. ಅದಕ್ಕೆ ಒಪ್ಪಿರುವ ಸಮಿತಿ ಕಾಂಪೌಂಡ್ ತೆರವುಗೊಳಿಸಿತು.

ಈ ಸಂದರ್ಭದಲ್ಲಿ ಶಾಸಕ ಎನ್.ಎ.ಹ್ಯಾರಿಶ್, ಬಿಬಿಎಂಪಿ ಮೇಯರ್ ಸಂಪತ್‌ರಾಜ್, ಮಜ್ಜೀದ್ ಇ ಅಸ್ಕರಿ ಮತ್ತು ಖಬರಸ್ತಾನ್ ಮ್ಯಾನೇಜಿಂಗ್ ಕಮಿಟಿ ಅಧ್ಯಕ್ಷ ಮೀರ್ ಅಲಿ ಝಾವದ್ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಟಿಡಿಆರ್ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಶ್, ಮಸೀದಿಯ ಗೋಡೆಯಿಂದ ವಾಹನ ದಟ್ಟಣೆ ಯಾಗುತ್ತಿದ್ದರಿಂದ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವಂತೆ ಕೋರಲಾಗಿತ್ತು. ಅದಕ್ಕೆ ಸ್ಪಂದಿಸಿರುವ ಮಸೀದಿ ಸಮಿತಿಯವರು ಜಾಗ ನೀಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಬೆಂಬಲಿಸಿದ್ದಾರೆ ಎಂದರು.

ಮೇಯರ್ ಸಂಪತ್‌ರಾಜ್ ಮಾತನಾಡಿ, ದಿವಾನ್ ಸರ್ ಮಿರ್ಜಾ ಇಸ್ಮಾಯೀಲ್ ಅವರು ಈ ಜಾಗವನ್ನು ವರ್ಕ್ಫ್ ಮಂಡಳಿಗೆ ನೀಡಿದ್ದಾರೆ. 1936ರಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಮಸೀದಿಯ ಕಾಂಪೌಂಡ್ ಗೋಡೆ ರಸ್ತೆಗೆ ಅಡ್ಡಲಾಗಿರುವುದರಿಂದ ದಟ್ಟಣೆಯಾಗುತ್ತಿತ್ತು. ಹಾಗಾಗಿ ಜಾಗ ಬಿಟ್ಟುಕೊಡುವಂತೆ ಕೋರಲಾಗಿತ್ತು. ಅದರಂತೆ ಅವರು ಜಾಗ ನೀಡಿದ್ದು, ಶೀಘ್ರದಲ್ಲಿ ಟಿಡಿಆರ್ ನೀಡಿ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಜಂಕ್ಷನ್‌ಗೆ ಹೆಸರು: ನಗರದ ಒಂದು ಕಡೆ ಜಾಗ ನೀಡುವಂತೆ ಹಾಗೂ ಜಾನ್ಸನ್ ಮಾರುಕಟ್ಟೆ ಬಳಿಯ ಜಂಕ್ಷನ್‌ಗೆ ಸರ್ ಮಿರ್ಜಾ ಇಸ್ಮಾಯೀಲ್ ಹೆಸರಿಡಲು ಮನವಿ ನೀಡುವುದಾಗಿ ಸಮಿತಿ ಅಧ್ಯಕ್ಷರು ತಿಳಿಸಿದ್ದು, ಮನವಿ ನೀಡಿದ ನಂತರ ಕೌನ್ಸಿಲ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.


ಮೆಟ್ರೊ ನಿಲ್ದಾಣಕ್ಕೆ ಮಿರ್ಜಾ ಇಸ್ಮಾಯೀಲ್ ಹೆಸರಿಗೆ ಒತ್ತಾಯ
ಸಾರ್ವಜನಿಕರಿಗೆ ಮಸೀದಿಯಿಂದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕಾಂಪೌಂಡ್ ತೆರವುಗೊಳಿಸಲಾಗಿದೆ. ಮಸೀದಿ ನಿರ್ಮಾಣಕ್ಕೆ ಬೇರೊಂದು ಕಡೆಯಲ್ಲಿ ಜಾಗ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು. ಜತೆಗೆ ಜಾನ್ಸನ್ ಮಾರುಕಟ್ಟೆ ಬಳಿಯ ಜಂಕ್ಷನ್ ಹಾಗೂ ಈ ಭಾಗದಲ್ಲಿ ನಿರ್ಮಾಣವಾಗುವ ನಮ್ಮ ಮೆಟ್ರೊ ನಿಲ್ದಾಣಕ್ಕೆ ದಿವಾನ್ ಸರ್.ಮಿರ್ಜಾ ಇಸ್ಮಾಯೀಲ್ ಅವರ ಹೆಸರಿಡುವಂತೆ ಮನವಿ ಮಾಡಲಾಗುವುದು.
-ಮೀರ್ ಅಲಿ ಝಾವದ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News