ಟಿಪ್ಪು ಜಯಂತಿ: ಮುಖ್ಯಮಂತ್ರಿಗೆ ಸಂಸದ ಪ್ರತಾಪ್ ಸಿಂಹ ಸವಾಲು

Update: 2017-10-23 13:50 GMT

ಬೆಂಗಳೂರು, ಅ.23: ವಿರೋಧವನ್ನು ಲೆಕ್ಕಿಸದೆ ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಹಾಕಿದರೆ, ನಾವೂ ಶಿಷ್ಟಾಚಾರವನ್ನು ಪಾಲಿಸಿ ಆಚರಣೆಯಲ್ಲಿ ಭಾಗಿಯಾಗುತ್ತೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರಿಂದ ಎದುರಾಗುವ ವಿರೋಧ, ಪ್ರತಿಕಾರವನ್ನು ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧರಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಸೋಮವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಟಿಪ್ಪುಜಯಂತಿ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಸಾವಿರಾರು ಹಿಂದೂ ದೇವಾಲಯ, ಚರ್ಚ್‌ಗಳನ್ನು ಧ್ವಂಸ ಮಾಡಿ ಲಕ್ಷಾಂತರ ಹಿಂದೂ ಕ್ರೈಸ್ತರನ್ನು ಕೊಲೆ ಮಾಡಿದ ಕ್ರೂರಿ. ಕನ್ನಡ ಭಾಷೆಯ ಬದಲಾಗಿ ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಎಂದು ಎಡಪಂಥಿಯರೇ ಬರೆದಿರುವ ಬಹುತೇಕ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿಗೆ ಯಾವುದೇ ಕೊಡುಗೆ ನೀಡದವನ ಜಯಂತಿಯನ್ನು ಆಚರಣೆ ಮಾಡುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ನಲ್ಲಿ ಯಾವ ಆದರ್ಶ ಕಂಡು ಜಯಂತಿ ಆಚರಣೆ ಮಾಡಲು ಹೊರಟಿದ್ದಾರೆ ಗೊತ್ತಾಗುತ್ತಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಮಾತ್ರಕ್ಕೆ ಸ್ವಾತಂತ್ರ ಹೋರಾಟಗಾರ ಆಗಲ್ಲ. ಒನಕೆ ಓಬವ್ವಳನ್ನು ಚೂರಿ ಇರಿದು ಕೊಲೆ ಮಾಡಿದವನ, ಮದಕರಿ ನಾಯಕನಿಗೆ ವಿಷ ಉಣಿಸಿ ಕೊಲೆ ಮಾಡಿದವನ, ಮೈಸೂರಿನ ಯದು ವಂಶ ನಿರ್ಣಾಮಕ್ಕೆ ಕತ್ತಿ ಮಸಿದವನ ಜಯಂತಿ ಆಚರಿಸಬೇಕೇ ಎಂಬ ಪ್ರಶ್ನೆಗೆ ಸಿಎಂ ಉತ್ತರಿಸಲಿ ಎಂದು ಆಗ್ರಹಿಸಿದರು.

ಟಿಪ್ಪು ಫುಕ್ಕಲ: ಆಂಗ್ಲೋ ಮೈಸೂರು ಯುದ್ಧದ ವೇಳೆ ಬ್ರಿಟಿಷರನ್ನು ಸಮರ್ಥವಾಗಿ ಎದುರಿಸದೇ ಹತನಾದ. ಹುಲಿಯೊಂದಿಗೆ ಹೋರಾಟ ನಡೆಸುವಷ್ಟು ವೀರನಲ್ಲ. ಅವನೊಬ್ಬ ಫುಕ್ಕಲ. ವೀರನೆಂದು ಬಿಂಬಿಸಿಕೊಳ್ಳಲು ನಕಲಿ ಚಿತ್ರ ಸಿದ್ಧಪಡಿಸಿದ್ದ. ಟಿಪ್ಪು ಆಧುನಿಕ ಯುದ್ಧೋಪಕರಣ ಮಿಸೈಲ್‌ಗಳನ್ನು ಹೊಂದಿದ್ದ ಎನ್ನುವುದು ಬರಿ ಸುಳ್ಳು ಎಂದು ಹೇಳಿದರು.

ಜನರ ವಿರೋಧವನ್ನು ಲೆಕ್ಕಿಸದೆ ಹಠಮಾರಿ ಧೋರಣೆಗೆ ಜೋತುಬಿದ್ದು ವಿವಾದಿತ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳನ್ನು ವ್ಯವಸ್ಥಿತವಾಗಿ ಕೊಲ್ಲಲು ಪ್ರಚೋದನೆ ನೀಡುತ್ತಿದಾರೆ ಎಂದು ಸಮಿತಿಯ ಸಂಚಾಲಕ ಅದ್ದಂಡ ಕಾರ್ಯಪ್ಪ ಕಿಡಿಕಾರಿದರು.

ಎರಡು ವರ್ಷದಲ್ಲಿ ಒಟ್ಟು 13 ಮಂದಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿದೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಕಳೆದ ಎರಡು ವರ್ಷಗಳಿಂದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಭಯೋತ್ಪಾದನೆ ಹೆಚ್ಚಾಗಿದೆ ಎಂದು ಭೀತಿ ವ್ಯಕ್ತಪಡಿಸಿದರು.

ಮತಾಂತರಕ್ಕೆ ಒಪ್ಪದ ಸಾವಿರಾರು ಹಿಂದೂ, ಕ್ರಿಶ್ಚಿಯನ್, ಕೊಡವ ಕುಟುಂಬಗಳನ್ನು ನಾಶ ಮಾಡಿದ ಟಿಪ್ಪು ಸುಲ್ತಾನ್ ಅನ್ಯಾಯ, ಕೊಲೆಗಳು, ಕ್ರೂರತನವನ್ನು ಮುಚ್ಚಿಡಲು ಢೋಂಗಿ ಜಾತ್ಯತೀತವಾದಿಗಳು, ಪ್ರಗತಿಪರರು ಪಯತ್ನಿಸುತ್ತಿದ್ದಾರೆ ಎಂದು ಕಾರ್ಯಪ್ಪ ಆರೋಪಿಸಿದರು.

ಗಲ್ಲಿಗೇರಿಸಬೇಕು 

ವಿವಾದಿತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ವಿರೋಧವನ್ನು ಲೆಕ್ಕಿಸದೇ ಜಯಂತಿ ಆಚರಣೆ ಮಾಡುವವರನ್ನು ಗಲ್ಲಿಗೇರಿಸಬೇಕು.

ಅದ್ದಂಡ ಕಾರ್ಯಪ್ಪ, ಸಮಿತಿ ಸಂಚಾಲಕ

ಮುಸಲ್ಮಾನರು ಮೂರ್ತಿ ಆರಾಧಕರಲ್ಲ. ಅವರು ಎಂದಿಗೂ ಮನೆಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಸರಕಾರ ಆಚರಿಸುವ ಟಿಪ್ಪು ಜಯಂತಿಗೆ ಹೋಗುವವರು ನಿಜವಾದ ಮುಸ್ಲಿಮರಲ್ಲ.

-ಪ್ರತಾಪ್ ಸಿಂಹ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News