ಬೆಂಗಳೂರು ವಿವಿಗೆ ದಲಿತರು ಉಪಕುಲಪತಿಯಾಗಿ ನೇಮಿಸಲು ಆಗ್ರಹ

Update: 2017-10-23 14:04 GMT

ಬೆಂಗಳೂರು, ಅ.23: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ದಲಿತ ಪ್ರಾಧ್ಯಾಪಕರನ್ನು ಉಪಕುಲಪತಿಯನ್ನಾಗಿ ನೇಮಕ ಮಾಡಲು ಶಿಫಾರಸ್ಸು ಸಲ್ಲಿಸಬೇಕು ಎಂದು ಭಾರತೀಯ ರಿಪಬ್ಲಿಕ್ ಪಕ್ಷದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದು 55 ವರ್ಷಗಳು ಕಳೆಯುತ್ತಿದೆ. ಆದರೆ, ಇದುವರೆಗೂ ಪರಿಶಿಷ್ಟ ಜಾತಿಗೆ ಸೇರಿದ ಒಬ್ಬ ಪ್ರಾಧ್ಯಾಪಕರೂ ಉಪಕುಲಪತಿಯಾಗಿ ನೇಮಕ ಮಾಡದಿರುವುದು ದುರಂತ. ಶತಶತಮಾನಗಳಿಂದ ಅಕ್ಷರದ ಅವಕಾಶದಿಂದ ವಂಚಿತರಾದ ದಲಿತ ಸಮುದಾಯವು ಇಂದಿಗೂ ಅಂತಹ ಅನೇಕ ಅವಕಾಶಗಳಿಂದ ವಂಚನೆಗೆ ಒಳಗಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

70-80 ರ ದಶಕದಲ್ಲಿ ರಾಜ್ಯದಲ್ಲಿ ಉಪಕುಲಪತಿಯಾಗಿ ನೇಮಕಗೊಳ್ಳುವ ಅರ್ಹತೆಯಿಲ್ಲದವರು ಇದ್ದರು. ಈಗ ಸ್ಥಿತಿ ಬದಲಾಗಿದ್ದು, ಅನೇಕ ಪ್ರಾಧ್ಯಾಪಕರು ಅರ್ಹತೆ ಹೊಂದಿರುವವರು ಇದಾರೆ. ಆದರೆ, ಸರಕಾರಗಳ ನಿರ್ಲಕ್ಷದಿಂದಾಗಿ ಅರ್ಹ ದಲಿತ ಸಮುದಾಯದವರು ವಂಚಿತರಾಗುತ್ತಿದ್ದಾರೆ. 80 ರ ದಶಕದಲ್ಲಿ ಹಿಂಬಾಕಿ ಹುದ್ದೆಗಳನ್ನು ತುಂಬುವ ಮೂಲಕ ವಿವಿಯ ವಿವಿಧ ವಿಭಾಗಳಲ್ಲಿನ ಪ್ರಾಧ್ಯಾಪಕರಾಗಿ ನೇಮಕಗೊಂಡ ಅನೇಕ ದಲಿತರು ನಿವೃತ್ತ ಅಂಚಿನಲ್ಲಿದ್ದಾರೆ. ಹಲವರು ನಿವೃತ್ತಿ ಹೊಂದಿದ್ದಾರೆ ಎಂದರು.

ರಾಜ್ಯ ಸರಕಾರ ರಚಿಸಿರುವ ಶೋಧನಾ ಸಮಿತಿಯು ಅರ್ಹ ದಲಿತ ಸಮುದಾಯದ ಪ್ರಾಧ್ಯಾಪಕರನ್ನು ಗುರುತಿಸಿಲ್ಲ. ಬದಲಿಗೆ ಸಮಿತಿಯು ದಲಿತೇತರ ಕಳಂಕಿತರನ್ನು ಪಟ್ಟಿ ಮಾಡಿದ್ದು, ಕಳಂಕಿತರು ಎಂಬ ಹಣೆಪಟ್ಟಿ ಹೊತ್ತಿದ್ದರಿಂದ ರಾಜ್ಯಪಾಲ ರು ತಿರಸ್ಕೃತಗೊಳಿಸಿದ್ದಾರೆ. ಹೀಗಾಗಿ, ಈ ಎರಡು ಸ್ಥಾನಗಳಿಗೆ ಅರ್ಹ ದಲಿತರನ್ನು ಶಿಫಾರಸ್ಸು ಮಾಡಬೇಕು. ಈ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News