10 ಕೋಟಿ ವೆಚ್ಚದಲ್ಲಿ ಯೋಜನಾ ವರದಿ ಸಿದ್ಧಪಡಿಸಲು ಸೂಚನೆ

Update: 2017-10-23 14:52 GMT

ಬೆಂಗಳೂರು, ಅ.23: ಜೆ.ಪಿ.ನಗರ ಡಾಲರ್ಸ್ ಕಾಲನಿಯಲ್ಲಿರುವ ರಾಜಕಾಲುವೆಯ ಮತ್ತು ಬಡಾವಣೆಯ ಚರಂಡಿಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಮೇಯರ್ ಸಂಪತ್‌ರಾಜ್ ಅಭಿಯಂತರರುಗಳಿಗೆ ಸೂಚಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಕಾಲೋನಿ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ನೀಡಿದ ಮನವಿ ಸ್ಪಂದಿಸಿ ಮೇಯರ್ ಪರಿಶೀಲನೆ ನಡೆಸಿದರು. ಈ ವೇಳೆ ಈ ಭಾಗದಲ್ಲಿ ಮಳೆ ಬಂದರೆ ರಾಜಕಾಲುವೆ ತುಂಬಿ ಹರಿದು, ಬನ್ನೇರುಘಟ್ಟ ಮುಖ್ಯರಸ್ತೆ ಮತ್ತು ಡಾಲರ್ಸ್ ಕಾಲನಿ ರಸ್ತೆ ಮತ್ತು ಮನೆಗಳಿಗೆ ನೀರು ತುಂಬಿ ಬಹಳ ಅನಾನುಕೂಲವಾಗುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮೇಯರ್, ಒಂದು ವಾರದೊಳಗೆ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದಲ್ಲಿ ಅದಕ್ಕೆ ಅನುಮೋದನೆ ದೊರಕಿಸಿಕೊಟ್ಟು ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು. ಅಲ್ಲದೆ, ಜಲಮಂಡಳಿಯು ರಾಜಕಾಲುವೆಗೆ ಚರಂಡಿ ನೀರನ್ನು ಹರಿಸುತ್ತಿದ್ದು, ಅದಕ್ಕೆ ಪರ್ಯಾಯ ಮಾರ್ಗದಲ್ಲಿ ನೀರು ಹರಿಸುವಂತೆ ಆದೇಶಿಸಿದ್ದು, ಈ ಕ್ರಮದಿಂದ ಬಡಾವಣೆಯಲ್ಲಿ ಹರಡುವ ಸಾಂಕ್ರಾಮಿಕ ರೋಗವನ್ನು ತಡೆಯಲು ಹಾಯಕವಾಗುವುದೆಂದು ತಿಳಿಸಿದರು.

ರಾಜಕಾಲುವೆಯಲ್ಲಿ ಹೂಳು ತೆಗೆದರೆ ಅನಾಹುತಗಳು ತಪ್ಪಲಿದ್ದು, ಇದಕ್ಕೆ ಪೂರಕವಾಗಿ ಈ ಭಾಗದಲ್ಲಿನ ಚರಂಡಿಗಳಲ್ಲಿನ ಸಂಪೂರ್ಣವಾಗಿ ಹೂಳನ್ನು ತೆಗೆದು ಹಾಗೂ ಅಭಿವೃದಿ್ಧ ಪಡಿಸಲಾಗುವುದೆಂದು ತಿಳಿಸಿದರು.

ನಂತರ ಜೆ.ಪಿ.ನಗರದ ದಾಲ್ಮೀಯ ಜಂಕ್ಷನ್ ಬಳಿ ನಡೆಯುತ್ತಿರುವ ಮೇಲು ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಅವರು, ಕಾಮಗಾರಿಯನ್ನು ಚುರುಕುಗೊಳಿಸುವಂತೆ ಆದೇಶಿಸಿ, ರೂ 26 ಕೋಟಿ ವೆಚ್ಚದ ದ್ವಿಮುಖ ಸಂಚಾರದ ನಾಲ್ಕು ಪಥದ ಒಟ್ಟು 296 ಮೀ ಉದ್ದದ ಮೇಲು ಸೇತುವೆಯ ಕಾಮಗಾರಿಯನ್ನು ಜನವರಿ ತಿಂಗಳೊಳಗೆ ಸಾರ್ವಜನಿಕರಿಗೆ ಮುಕ್ತ ಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿದರು. ಕಾಮಗಾರಿ ವಿಳಂಬ ಮಾಡಿದರೆ, ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 ಈ ಸಂದರ್ಭದಲ್ಲಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ವಿಜಯ್ ಕುಮಾರ್, ಪಾಲಿಕೆ ಸದಸ್ಯ ಲಕ್ಷ್ಮಿ ನಟರಾಜ್, ಮುಖ್ಯ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News