‘ಭಾರತ ಹಾಕಿ ಇನ್ನಷ್ಟು ಸ್ಥಿರ ಪ್ರದರ್ಶನ ನೀಡಬೇಕು’

Update: 2017-10-23 19:02 GMT

ಹೊಸದಿಲ್ಲಿ, ಅ.23: ವಿಶ್ವದ ಅಗ್ರ ತಂಡಗಳೊಂದಿಗಿರುವ ಅಂತರವನ್ನು ಕಡಿಮೆ ಮಾಡಬೇಕಾದರೆ ಭಾರತ ಇನ್ನೂ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ ಎಂದು ಕೋಚ್ ಜೋರ್ಡ್ ಮರಿಜಿನ್ ಅಭಿಪ್ರಾಯಪಟ್ಟಿದ್ದಾರೆ.

‘‘ಏಷ್ಯಾಕಪ್ ಭಾರತದ ಕೋಚ್ ಆಗಿ ನನ್ನ ಮೊದಲ ಟೂರ್ನಿಯಾಗಿತ್ತು. ನಾವು ನಿಜವಾಗಿಯೂ ಉತ್ತಮ ಹಾಕಿ ಆಡಿದ್ದೇವೆ. ಶುಭಾರಂಭಮಾಡಿರುವ ತಂಡದ ಆಟಗಾರರ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ನಮ್ಮಲ್ಲಿ ಸ್ಥಿರತೆಯ ಕೊರತೆಯಿದೆ. ಮಲೇಷ್ಯಾ ವಿರುದ್ಧ ಫೈನಲ್‌ನಲ್ಲಿ ಇದು ಸಾಬೀತಾಗಿದೆ. ಫೈನಲ್‌ನಲ್ಲಿ ನಾವು ಇನ್ನಷ್ಟು ಗೋಲುಗಳನ್ನು ಬಾರಿಸಬೇಕಾಗಿತ್ತು. ಕೊನೆಯ ಕ್ವಾರ್ಟರ್‌ನಲ್ಲಿ ನಮ್ಮ ಪ್ರದರ್ಶನ ಮಟ್ಟ ಕುಸಿದಿತ್ತು. ಇದು ಮಲೇಷ್ಯಾಕ್ಕೆ ಮರಳಿ ಹೋರಾಡಲು ಅನುವು ಮಾಡಿಕೊಟ್ಟಿತು’’ ಎಂದು ಮರಿಜಿನ್ ಹೇಳಿದ್ದಾರೆ. ರೊಲ್ಯಾಂಡ್ ಒಲ್ಟಮನ್ಸ್ ದಿಢೀರನೆ ಕೋಚ್ ಹುದ್ದೆ ತ್ಯಜಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಡಚ್‌ನ ಮರಿಜಿನ್ ಭಾರತದ ನೂತನ ಹಾಕಿ ಕೋಚ್ ಆಗಿ ಅಧಿಕಾರವಹಿಸಿಕೊಂಡಿದ್ದರು.

ಮನ್‌ಪ್ರೀತ್ ಸಿಂಗ್ ಅವರ ನಾಯಕತ್ವ ಗುಣವನ್ನು ಶ್ಲಾಘಿಸಿದ ಮರಿಜಿನ್,‘‘ ಮನ್‌ಪ್ರೀತ್ ನಾಯಕತ್ವ ಅತ್ಯುತ್ತಮವಾಗಿತ್ತು. ಫೈನಲ್ ಪಂದ್ಯದ ಕೊನೆಯ 7 ನಿಮಿಷದ ಆಟದಲ್ಲಿ ಅವರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು. ನಾನು ಆಟಗಾರರಿಂದ ಇಂತಹ ಪ್ರದರ್ಶನವನ್ನು ನಿರೀಕ್ಷಿಸುವೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News