ಸರಕಾರಿ ಸೌಲಭ್ಯಗಳ ಕುರಿತ ಮಾರ್ಗದರ್ಶನ: ಸಂಚಾಲಕಿ ಗೀತಾ
ಬೆಂಗಳೂರು, ಅ.24: ಬಡತನ ರೇಖೆಗಿಂತ ಕೆಳಗಿರುವ ಮತ್ತು ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸರಕಾರದ ಯೋಜನೆಗಳ ಪರಿಚಯ ಮತ್ತು ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾರ್ಗದರ್ಶನ ನೀಡಲು ಸಹಾಯ ಸಿಂಗಲ್ ವಿಂಡೋ ಕೇಂದ್ರವು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಸಂಚಾಲಕಿ ಗೀತಾ, ನಗರದಲ್ಲಿ ಬಡ ಜನರ ಶ್ರೇಯಾಭಿವೃದ್ಧಿಗಾಗಿ ಸರಕಾರ ಜಾರಿ ಮಾಡಿರುವ ಹಲವು ಯೋಜನೆಗಳು ನಿರ್ಗತಿಕ, ಸ್ಲಂ ಮಟ್ಟದ ಜನರಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ನಾವು 14 ಸರಕಾರಿ ಕಚೇರಿ ಮತ್ತು ವಿವಿಧ ಸಂಸ್ಥೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಶಿಬಿರಗಳು ಹಾಗೂ ಅದನ್ನು ಪಡೆದುಕೊಳ್ಳಲು ಅಗತ್ಯವಾದ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ ಇಲಾಖೆ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವು ಇಲಾಖೆಗಳಲ್ಲಿನ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಬಡವರು ಇಲಾಖೆಗಳಲ್ಲಿನ ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ 080- 41263115 ಅಥವಾ 99455 80584 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಸದಸ್ಯರಾದ ರೇಣುಕಾ, ಚಿತ್ರ, ರಾಧ, ಗಾಯತ್ರಿ ಉಪಸ್ಥಿತರಿದ್ದರು.