ನ.1 ರಿಂದ ಸಂಗೀತ ಉತ್ಸವ
ಬೆಂಗಳೂರು, ಅ.24: ಕೆ.ಕೆ.ಮೂರ್ತಿ ಸ್ಮಾರಕ ಸಂಗೀತ ಉತ್ಸವ-2017ವನ್ನು ನ.1 ರಿಂದ ಐದು ದಿನಗಳ ಕಾಲ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿ ಆಫ್ ಮ್ಯೂಸಿಕ್ ಸಂಸ್ಥೆಯ ಸದಸ್ಯ ಹಾಗೂ ಮಾಜಿ ವಿಧಾನಪರಿಷತ್ತು ಸದಸ್ಯ ಡಾ.ಪಿ.ರಾಮಯ್ಯ, ಆಧುನಿಕ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ಸಂಗೀತವನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಹಾಗೂ ಹೊಸದಾಗಿ ಸಂಗೀತ ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿರುವವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸ್ತ್ರೀಯ ಸಂಗೀತದ ಕುರಿತಾದ ಪ್ರಾತ್ಯಕ್ಷಿತೆಗಳು, ಎಳೆಯ ಪ್ರತಿಭಾನ್ವಿತ ಕಲಾವಿದರಿಂದ ಮೊಗಸಾಲೆಯ ಕಚೇರಿಗಳು, ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಹಿಂದೂಸ್ಥಾನಿ ಗಾಯಕಿಯರಾದ ಡಾ.ಕೆ.ಎಸ್.ವೈಶಾಲಿ ಮತ್ತು ಕುಶಿಕಿ ಚಕ್ರೋತ್ರಿ ಅವರ ಸಂಗೀತ ಕಛೇರಿ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದು.
ಉತ್ಸವದ ಕೊನೆ ದಿನ ಬಾನ್ಸುರಿ ಕಲಾವಿದ ಪಂಡಿತ್ ಪ್ರವೀಣ್ ಗೋಡಖಿಂಡಿ ಅವರಿಗೆ ಅಕಾಡಮಿ ಆಫ್ ಮ್ಯೂಸಿಕ್ ಚೌಡಯ್ಯ ಪ್ರಶಸ್ತಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಎರಡು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿದೆ ಎಂದು ವಿವರಿಸಿದರು.