ಅ.26ರಂದು 'ವಿಚಾರ ಸಂಕಿರಣ'
ಬೆಂಗಳೂರು, ಅ.24: ‘ಹಿಂದುಳಿದ ವರ್ಗಗಳ ಒಳ ವರ್ಗೀಕರಣ ಮತ್ತು ಸಾಮಾಜಿಕ ನ್ಯಾಯ’ ಕುರಿತು ಅ.26ರಂದು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಡಿ.ದೇವರಾಜು ಅರಸು ಸಂಶೋಧನಾ ಸಂಸ್ಥೆ ವತಿಯಿಂದ ವಸಂತನಗರದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ, ಹಿಂದುಳಿದ ಸಮುದಾಯಗಳಲ್ಲಿ ಕೆಲವು ಜಾತಿಗಳು ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿದಿಲ್ಲ. ಕೆಲವು ಬಲಿಷ್ಠ ಜಾತಿಗಳು ಸಂವಿಧಾನಬದ್ಧವಾಗಿ ಸಿಗುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಮುಂದುವರಿಯುತ್ತಿವೆ. ಹೀಗಾಗಿ, ಹಲವರು ಒಳ ವರ್ಗೀಕರಣಕ್ಕಾಗಿ ಚಳವಳಿ ಆರಂಭಿಸಿದ್ದಾರೆ. ಇದರ ಭಾಗವಾಗಿ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದಿನದಿಂದ ದಿನಕ್ಕೆ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಗಾಗಿ ಪೈಪೋಟಿ ಆರಂಭವಾಗಿದೆ. ಒಂದು ಕಡೆ ಒಳ ಮೀಸಲಾತಿಯ ಕೂಗು ಕೇಳಿ ಬರುತ್ತಿದೆ. ಇದರ ನಡುವೆ ನಾಳೆ ಕೇಂದ್ರ ಸರಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಹಿಂದುಳಿದ ವರ್ಗಗಳ ಒಳ ವರ್ಗೀಕರಣ ಅಗತ್ಯತೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಆದುದರಿಂದ ಇದರ ಸಾಧಕ-ಬಾಧಕಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವುದರಿಂದ, ರಾಜ್ಯದಲ್ಲಿಯೂ ಈ ಚರ್ಚೆ ಹುಟ್ಟು ಹಾಕಲು ಈ ವಿಚಾರ ಸಂಕಿರಣ ನೆವಾಗಲಿದೆ ಎಂದು ಅವರು ತಿಳಿಸಿದರು.