ಶೇ.30 ರಷ್ಟು ಮಧ್ಯಂತರ ಪರಿಹಾರಕ್ಕಾಗಿ ಆಗ್ರಹಿಸಿ ಅ.28ರಂದು ರಾಜ್ಯ ಸರಕಾರಿ ನೌಕರರ ಧರಣಿ
ಬೆಂಗಳೂರು, ಅ.24: ರಾಜ್ಯ ಸರಕಾರಿ ನೌಕರರಿಗೆ ಶೇ.30 ರಷ್ಟು ಮಧ್ಯಂತರ ಪರಿಹಾರ ತಕ್ಷಣವೇ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಅ.28 ರಂದು ನಗರದ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನಾ ಧರಣಿ ನಡೆಸಲು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ತೀರ್ಮಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ, ನೌಕರರ ಹೋರಾಟ ಪಲವಾಗಿ ಸರಕಾರ ವೇತನ ಆಯೋಗ ರಚನೆ ಮಾಡಿ, 4 ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿತ್ತು. ಈ ವೇಳೆ ಶೇ.30 ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಆಯೋಗ ಶಿಫಾರಸು ಮಾಡಬೇಕು ಎಂದು ತಿಳಿಸಿದ್ದರು. ಆದರೆ, ಆಯೋಗವು 4 ತಿಂಗಳೊಳಗೆ ವರದಿ ನೀಡುತ್ತಿದ್ದು, ಮಧ್ಯಂತರ ಪರಿಹಾರ ಶಿಫಾರಸ್ಸು ಮಾಡುವುದಿಲ್ಲ ಎಂದು ಹೇಳಿಕೆ ನೀಡಿತ್ತು ಎಂದು ಹೇಳಿದರು.
ಇದೀಗ ವೇತನ ಆಯೋಗ ವಿವಿಧ ಕಾರಣಗಳು ನೀಡಿ ಕಾಲಾವಧಿ ವಿಸ್ತರಿಸುವಂತೆ ಕೋರಿದ್ದು, ಸರಕಾರ 4 ತಿಂಗಳು ವಿಸ್ತರಿಸಿದೆ. ಹೀಗಾಗಿ, ವೇತನ ಆಯೋಗ ನಮ್ಮ ಬೇಡಿಕೆಯನ್ನು ಪರಿಗಣಿಸಿ ಮಧ್ಯಂತರ ಪರಿಹಾರವನ್ನು ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ, ಮುಂದಿನ ಮೇನಲ್ಲಿ ಸರಕಾರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ಇದಕ್ಕೆ ಮೊದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಇದರಿಂದ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಹಿನ್ನಡೆಯಾಗುತ್ತದೆ ಹಾಗೂ ನಮ್ಮ ಬೇಡಿಕೆ ನನೆಗುದಿಗೆ ಬೀಳುತ್ತದೆ ಎಂದರು.
ಬೇಡಿಕೆಗಳು: ಜನವರಿ 2017 ರಿಂದ ಅನ್ವಯವಾಗುವಂತೆ ಶೇ.30 ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ಕೇಂದ್ರ ಸರಕಾರಿ ನೌಕರರಿಗೆ ಸಮನಾಗುವಂತೆ 6 ನೆ ವೇತನ ಆಯೋಗದಲ್ಲಿ ನೌಕರರ ವೇತನವನ್ನು 1:9 ಅನುಪಾತದಲ್ಲಿ ನಿಗದಿಪಡಿಸಿ, ಕನಿಷ್ಠ 21 ಹಾಗೂ ಗರಿಷ್ಠ 2 ಲಕ್ಷಕ್ಕೆ ಶಿಫಾರಸು ಮಾಡಬೇಕು. 2.60 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಮಹಿಳಾ ನೌಕರರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿದರು.