ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಖಚಿತ: ವೀರಪ್ಪ ಮೊಯ್ಲಿ
ಬೆಂಗಳೂರು, ಅ.24: ಕೇಂದ್ರ ಸರಕಾರದ ದುರಾಡಳಿತದಿಂದ ದೇಶದೆಲ್ಲೆಡೇ ಪ್ರಧಾನಿ ಮೋದಿ ಆಡಳಿತದ ವಿರೋಧಿ ಅಲೆ ಸೃಷ್ಟಿಯಾಗಿದೆ. ಸದ್ಯದಲ್ಲೇ ನಡೆಯುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗುವುದು ಖಚಿತ ಎಂದು ಸಂಸದ ವೀರಪ್ಪ ಮೊಯ್ಲಿ ಭವಿಷ್ಯ ನುಡಿದ್ದಾರೆ.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತರಾತುರಿಯಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯಿಂದ ಜನರು ಅತಂತ್ರಕ್ಕೆ ಸಿಲುಕಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಪ್ರಧಾನಿ ಮೋದಿ ಎಡವಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಜಿಡಿಪಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಷ್ಟ್ರದ ಆರ್ಥಿಕತೆ ಹಿಂದೆಂದು ಕಂಡರಿಯದಂತ ದುರಂತಮಯವಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ವಿರೋಧದ ಅಲೆ ಗೋಚರಿಸಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ನೆಲಕಚ್ಚೋದು ಖಚಿತ ಎಂದರು.
ಮೋದಿ ತಾಳಕ್ಕೆ ಆಯೋಗದ ಕುಣಿತ: ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಘೋಷಣೆ ಮಾಡದೆ ಫಲಿತಾಂಶದ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಪ್ರಧಾನಿ ಸೂಚಿಸಿದ ಬಳಿಕ ಮತದಾನದ ದಿನಾಂಕ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ. ಇದು ಘೋರ ಅಪರಾಧ. ಸೋಲುವ ಭೀತಿಯಿಂದಲೇ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಪ್ರಧಾನಿ ಮೋದಿಯವರ ತಾಳಕ್ಕೆ ತಕ್ಕಂತೆ ಚುನಾವಣಾ ಆಯೋಗ ಕುಣಿಯುತ್ತಿದೆ ಎಂದು ಕಿಡಿ ಕಾರಿದರು.
ಉದ್ಯೋಗ ಸೃಷ್ಟಿಯಲ್ಲೂ ಹಿನ್ನಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಲ್ಕುವರೆ ವರ್ಷದ ಆಡಳಿತ ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತವನ್ನು ತುಲನೆ ಮಾಡಿ ಮಾತನಾಡಿದ ಸಂಸದ ಮೊಯ್ಲಿ, 2013 ರಲ್ಲಿ ಕೈಗಾರಿಕೆಗಳ ಪ್ರಗತಿಯಲ್ಲಿ 11ನೆ ಸ್ಥಾನದಲ್ಲಿದ್ದ ರಾಜ್ಯ ಸದ್ಯ ಪ್ರಥಮ ಸ್ಥಾನದಲ್ಲಿ. ಒಟ್ಟು 114.19 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಕೇಂದ್ರ ಸರಕಾರದ ಆಡಳಿತದಿಂದ ದೇಶದಲ್ಲಿ ಕೈಗಾರಿಕೆಗಳ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸಿದೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಪ್ರಧಾನಿ ಮೋದಿಯ ವಾತು ಹುಸಿಯಾಗಿದೆ ಎಂದು ಟೀಕಿಸಿದರು.
ಅನ್ನ ಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಹಸಿವಿನಿಂದ ಯಾರು ಸತ್ತಿಲ್ಲ. ಆದರೆ ದೇಶದಲ್ಲಿ ಹಸಿವೆಯಿಂದ ಸತ್ತವರ ಪ್ರಮಾಣದಲ್ಲಿ ಹೆಚ್ಚಾಗಿದೆ. 50 ಸಾವಿರಕ್ಕಿಂತಲೂ ಹೆಚ್ಚಿನ ರೈತರ ಸಾಲ ಮನ್ನಾ, ಕೃಷಿಗಾಗಿ ಹಲವು ಯೋಜನೆಗಳನ್ನು ತಂದು ರೈತರ ಆರ್ಥಿಕ ಮಟ್ಟ ಸುಧಾರಿಸಿದೆ. ಆದರೆ ಕೇಂದ್ರ ಸರಕಾರದ ಸಾಧನೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಶೂನ್ಯ ಎಂದು ಹೇಳದರು.
ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ: ರಾಜ್ಯ ಸರಕಾರದ ಕಳೆದ ನಾಲ್ಕುವರೆ ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದೆ. ಆದರೆ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಕಲ್ಲಿದ್ದಲು ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪವನ್ನು ಕೆಣುಕುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಪ್ರಕರಣ ಕೋರ್ಟ್‌ನಲ್ಲಿದ್ದರೂ ನಿರಾಧಾರವಾಗಿ ಬಿಜೆಪಿ ಮುಖಂಡರು ಆರೋಪಿಸುವುದು ಸರಿಯಲ್ಲ. ಆರೋಪ ಕೇವಲ ಚುನಾವಣೆಯ ನಾಟಕ ಎಂದು ವ್ಯಂಗ್ಯವಾಡಿದರು.
ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿದ್ದು ರಾಜ್ಯ ರಾಜಕಾರಣದಲ್ಲಿ ಅಳಿಸಲಾಗದ ಕಪ್ಪುಚುಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಬಿಜೆಪಿಯ ಮುಖಂಡರಿಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ಯಾವುದೇ ನೈತಿಕತೆ ಇಲ್ಲ.
-ವೀರಪ್ಪ ಮೊಯ್ಲಿ, ಸಂಸದ