×
Ad

ಸಯನೈಡ್ ಮೋಹನ್‌ಗೆ ಗಲ್ಲು ಶಿಕ್ಷೆ ರದ್ದು

Update: 2017-10-24 20:42 IST

ಬೆಂಗಳೂರು, ಅ.24: ದಕ್ಷಿಣ ಕನ್ನಡ ಜಿಲ್ಲೆಯ ಲೀಲಾ ಎಂಬ ಮಹಿಳೆಯ ಮೇಲಿನ ಅತ್ಯಾಚಾರ, ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಯನೈಡ್ ಮೋಹನ್‌ ಕುಮಾರ್‌ಗೆ ಕೆಳ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ, ಮೃತಳ ಚಿನ್ನಾಭರಣ ದರೋಡೆ ಮಾಡಿದ ಆರೋಪದಲ್ಲಿ ಮಾತ್ರ ದೋಷಿ ಎಂದು ಪರಿಗಣಿಸಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ 4ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಅರ್ಜಿ ಹಾಗೂ ಗಲ್ಲು ಶಿಕ್ಷೆ ರದ್ದುಕೋರಿ ಮೋಹನ್‌ ಕುಮಾರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಲೀಲಾ ಅವರನ್ನು ಮೋಹನ್‌ ಕುಮಾರ್ ಅತ್ಯಾಚಾರ, ಅಪಹರಣ ಹಾಗೂ ಸಯನೈಡ್ ತಿನ್ನಿಸಿ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಹಾಗೂ ಸಾಕ್ಷ್ಯಾಧಾರಗಳನ್ನು ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ, 366, 376, 328, 394, 417, 302, 201 ಕಲಂ ಅಡಿಯಲ್ಲಿ ಮೋಹನ್ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ರದ್ದುಪಡಿಸಲಾಗುವುದು. ಹಾಗೂ ಲೀಲಾ ಅವರ ಮೇಲಿನ ಚಿನ್ನಾಭರಣಗಳನ್ನು ದೋಚಿರುವ ಬಗ್ಗೆ ಸಾಕ್ಷಿಗಳನ್ನು ಕಲೆ ಹಾಕಿದ ಹಿನ್ನೆಲೆಯಲ್ಲಿ 392 ಕಲಂ ಅಡಿಯಲ್ಲಿ ಮೋಹನ್‌ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ವಿಭಾಗೀಯ ಪೀಠ ಆದೇಶಿಸಿತು.

ಪ್ರಕರಣವೇನು: ಅಪರಾಧಿ ಸಯನೈಡ್ ಮೋಹನ್‌ ಕುಮಾರ್, 2005ರ ಸೆ.9ರಂದು ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿರುವ ಬಸ್ ನಿಲ್ದಾಣದಲ್ಲಿ ಲೀಲಾ(32)ರನ್ನು ಪರಿಚಯ ಮಾಡಿಕೊಂಡು ತಾನು ಕೂಡ ನಿಮ್ಮ ಜಾತಿಯವನು, ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಸುಳ್ಳು ಹೇಳಿ ಮೈಸೂರಿಗೆ ಕರೆದುಕೊಂಡು ಹೋಗಿ ಮೈಸೂರಿನ ಎಂಟಿಆರ್ ಡಿಲಕ್ಸ್ ಲಾಡ್ಜ್‌ನಲ್ಲಿ ರೂಮ್‌ನ್ನು ಬಾಡಿಗೆ ತೆಗೆದುಕೊಂಡು ಇಚ್ಛೆಗೆ ವಿರುದ್ಧವಾಗಿ ಲೀಲಾರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಾಗೂ 2005ರ ಸೆ.10ರಂದು ನೌಕರಿ ಹುಡುಕಬೇಕಾಗಿದೆ. ಹೀಗಾಗಿ, ನಿನ್ನ ಎಲ್ಲ ಚಿನ್ನಾಭರಣಗಳನ್ನು ರೂಮ್ ನಲ್ಲಿ ಇಟ್ಟು ಬಾ ಎಂದು ಹೇಳಿದ್ದಾನೆ.

ಅದೇ ರೀತಿಯಾಗಿ ಮಹಿಳೆಯು ತನ್ನ ಎಲ್ಲ ಚಿನ್ನಾಭರಣಗಳನ್ನು ರೂಮ್‌ನಲ್ಲಿ ಇಟ್ಟು ಮೋಹನ್‌ನೊಂದಿಗೆ ಮೈಸೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿ ಲೀಲಾಗೆ ನೀನು ಗರ್ಭ ಧರಿಸುವ ಸಂಭವವಿದೆ. ಹೀಗಾಗಿ, ಈ ಔಷಧಿಯನ್ನು ಶೌಚಾಲಯಕ್ಕೆ ಹೋಗಿ ತೆಗೆದುಕೊ, ಗರ್ಭವತಿಯಾಗುವುದಿಲ್ಲ ಎಂದು ಹೇಳಿದ್ದಾನೆ. ಅದೇ ರೀತಿ ಮಹಿಳೆಯು ಔಷಧಿ ತೆಗೆದುಕೊಳ್ಳಲು ಹೋದಾಗ ಮೋಹನ್, ಲೀಲಾ ಸತ್ತಿರುವುದನ್ನು ಅರಿತುಕೊಂಡು ಸೀದಾ ತಾವು ತಂಗಿದ್ದ ಲಾಡ್ಜ್‌ಗೆ ಹೋಗಿ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದನು.

ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಮಬಂಧ ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ, ಕೆಳ ನ್ಯಾಯಾಲಯವು ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News