×
Ad

1ರಿಂದ 10ನೆ ತರಗತಿಯವರೆಗೆ ಕನ್ನಡ ಭಾಷೆ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ

Update: 2017-10-24 20:55 IST

ಬೆಂಗಳೂರು, ಅ.24: ರಾಜ್ಯ ಸರಕಾರವು 1 ರಿಂದ 10ನೆ ತರಗತಿಯವರೆಗೆ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಯಾವ ಯಾವ ಶಾಲೆಗಳಲ್ಲಿ 2015-16ನೆ ಸಾಲಿನಿಂದ ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಪ್ರಾರಂಭಿಸಿರುವುದಿಲ್ಲವೋ ಅಂತಹ ಶಾಲೆಗಳಲ್ಲಿ 2017-18ನೆ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಆರಂಭಿಸಬೇಕು.
2018-19ನೆ ಶೈಕ್ಷಣಿಕ ವರ್ಷದಲ್ಲಿ 1ನೆ ಮತ್ತು 2ನೆ ತರಗತಿಗಳಲ್ಲಿ ಹಾಗೂ ಇದೇ ರೀತಿ 10ನೆ ತರಗತಿಯವರೆಗೆ ಕನ್ನಡ ಭಾಷಾ ಕಲಿಕೆಯನ್ನು ಹಂತ ಹಂತವಾಗಿ ವಿಸ್ತರಿಸುವಂತೆ ಸರಕಾರ ಕಟ್ಟಪ್ಪಣೆ ನೀಡಿದೆ.

2017-18ನೆ ಸಾಲಿನಲ್ಲಿ 1ನೆ ತರಗತಿ, 2018-19ರಲ್ಲಿ 1 ಮತ್ತು 2ನೆ ತರಗತಿ, 2019-20ರಲ್ಲಿ 1, 2 ಮತ್ತು 3ನೆ ತರಗತಿ, 2020-21ರಲ್ಲಿ 1, 2, 3 ಮತ್ತು 4ನೆ ತರಗತಿ, 2021-22ರಲ್ಲಿ 1,2,3,4 ಮತ್ತು 5ನೆ ತರಗತಿ, 2022-23ರಲ್ಲಿ 1, 2, 3, 4, 5 ಮತ್ತು 6ನೆ ತರಗತಿ, 2023-24ರಲ್ಲಿ 1, 2, 3, 4, 5, 6 ಮತ್ತು 7ನೆ ತರಗತಿ, 2024-25ರಲ್ಲಿ 1, 2, 3, 4, 5, 6, 7 ಮತ್ತು 8ನೆ ತರಗತಿ, 2025-26ರಲ್ಲಿ 1, 2, 3, 4, 5, 6, 7, 8 ಮತ್ತು 9ನೆ ತರಗತಿ, 2026-27ರಲ್ಲಿ 1, 2, 3, 4, 5, 6, 7, 8, 9 ಮತ್ತು 10ನೆ ತರಗತಿವರೆಗೆ ಕನ್ನಡ ಭಾಷಾ ಕಲಿಕೆಯನ್ನು ವಿಸ್ತರಿಸುವಂತೆ ಸರಕಾರ ಸೂಚನೆ ನೀಡಿದೆ.

ಇತರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ವಲಸೆ ಬಂದು 2 ರಿಂದ 10ನೆ ತರಗತಿಯಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 1ನೆ ತರಗತಿಗೆ ನಿಗದಿಪಡಿಸಿದ ಪಠ್ಯಪುಸ್ತಕವನ್ನು ಅವರು ರಾಜ್ಯದಲ್ಲಿನ ವ್ಯಾಸಂಗದ ಮೊದಲ ವರ್ಷದಲ್ಲಿ ಕಲಿಯಬೇಕು. 2ನೆ ವರ್ಷ ಮತ್ತು ತದನಂತರದ ವರ್ಷಗಳಲ್ಲಿ ಕಲಿಯುವ ಪಠ್ಯಪುಸ್ತಕಗಳು ಕ್ರಮಬದ್ಧವಾಗಿ 2ನೆ ತರಗತಿ, 3ನೆ ತರಗತಿ ಹೀಗೆ ಅನುಕ್ರಮವಾಗಿ ಮುಂದಿನ ತರಗತಿಗಳ ಪಠ್ಯಪುಸ್ತಕಗಳಾಗಿರಬೇಕು.
ಯಾವ ಶಾಲೆಯಲ್ಲಿ ಪ್ರಾರಂಭಿಕ ತರಗತಿಯು 1ನೆ ತರಗತಿಯಾಗಿರುವುದಿಲ್ಲವೊ ಅಂತಹ ಶಾಲೆಯಲ್ಲಿನ ಪ್ರಾರಂಭಿಕ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಆಯಾ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಬೇಕು ಎಂದು ಆದೇಶಿಸಲಾಗಿದೆ.

1 ರಿಂದ 4ನೆ ತರಗತಿ ಕನ್ನಡ ಪ್ರಥಮ ಭಾಷೆ ಪುಸ್ತಕಗಳಿಗೆ ಸಂಬಂಧಿಸಿದಂತೆ ನಲಿಕಲಿ ಪುಸ್ತಕಗಳು ಸರಕಾರಿ ಶಾಲೆಗಳಿಗೆ ಅನ್ವಯಿಸುತ್ತದೆ. ಕಲಿನಲಿ ಪುಸ್ತಕಗಳು ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ. ಸಕ್ಷಮ ಪ್ರಾಧಿಕಾರಿಗಳು ತಮ್ಮ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಮಾಧ್ಯಮದ ಶಾಲೆಗಳನ್ನು ಗುರುತಿಸಬೇಕು ಎಂದಿದೆ.

ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವಾಗಿ ಜಾರಿಗೊಳಿಸಲು ಅಗತ್ಯವಾದ ಕ್ರಮವಹಿಸಬೇಕು. ಈ ಸಂಬಂಧ ಅಗತ್ಯ ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಸಕ್ಷಮ ಪ್ರಾಧಿಕಾರಿಗಳು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೆ ತಮ್ಮ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಹೊರಡಿಸಬೇಕು. ಪ್ರತೀ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೆ ಪ್ರತಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಜಾರಿಗೊಳಿಸುವ ಬಗ್ಗೆ ಶಾಲಾವಾರು ವರದಿಯನ್ನು ಕ್ರೋಡೀಕರಿಸಿ ದಾಖಲಿಸಬೇಕು. ಹಾಗೂ ಜಾರಿಗೊಳಿಸಿರುವ ಬಗ್ಗೆ ಶಾಲಾವಾರು ವರದಿಯನ್ನು ಕ್ರೋಡೀಕರಿಸಿ ದಾಖಲಿಸಬೇಕು. ಪಾಲಿಸಿರುವ ಮತ್ತು ಪಾಲಿಸದೇ ಇರುವ ಶಾಲೆಗಳ ಮಾಹಿತಿಯನ್ನು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾಹಿತಿಗಳನ್ನು) ಪ್ರತ್ಯೇಕವಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳಿಗೆ ಉಪನಿರ್ದೇಶಕರ ಮುಖಾಂತರ ಸಲ್ಲಿಸಬೇಕು ಎಂದು ರಾಜ್ಯ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News