2022ಕ್ಕೆ ಭಾರತ ಮಾದರಿ ರಾಷ್ಟ್ರವಾಗಲಿದೆ: ರಾಮನಾಥ ಕೋವಿಂದ್
ಬೆಂಗಳೂರು, ಅ.24: ಕಾರ್ಮಿಕರು, ವಿಜ್ಞಾನಿಗಳು, ಕೃಷಿಕರ ಅಸ್ತಿತ್ವವಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯು ಯಾವುದೇ ಅರ್ಥ ಕೊಡುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ ದೊರೆತು 2022ಕ್ಕೆ 75 ವರ್ಷ ತುಂಬಲಿದೆ. 2022 ರ ವೇಳೆಗೆ ಭಾರತವನ್ನು ಒಂದು ಮಾದರಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಎಲ್ಲ ವಿಧಗಳಲ್ಲೂ ನಾವು ಶ್ರಮಿಸಬೇಕಿದೆ. ಭಾರತೀಯ ವಿಜ್ಞಾನ ಸಂಸ್ಥೆಗೆ ಜೆ ಎನ್ ಟಾಟಾ ಅವರ ಹೆಗ್ಗುರುತು ಇದ್ದು, ಇದು ಒಂದು ವಿಜ್ಞಾನದ ಆವಿಷ್ಕಾರದ ಒಂದು ಕೇಂದ್ರ ಬಿಂದು ಆಗಿ ನಿಂತಿದೆ ಎಂದರು.
ಇಂದು ನಾವು ನ್ಯಾನೋ ಟೆಕ್ನಾಲಜಿ, ಜೈವಿಕ ವಿಜ್ಞಾನ, ಜೆನರಿಕ್ ಔಷಧಿ ಹಾಗೂ ಲಸಿಕೆಗಳು ಮುಂತಾದವುಗಳಲ್ಲಿ ಅಪಾರ ಸಾಧನೆ ಮಾಡಿದ್ದೇವೆ. ವಿಜ್ಞಾನಿಗಳಿಗೆ ಯಾವಾಗಲೂ ವಿಜ್ಞಾನದ ಹಸಿವಿದ್ದು, ಹೊಸ ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂದು ಭಾರತ ಬಡತನ, ಅನಾರೋಗ್ಯ, ಆಹಾರ ಮತ್ತು ಇಂಧನ ಶಕ್ತಿಗಳಲ್ಲಿ ಕೊರತೆಯನ್ನು ಅನುಭವಿಸುತ್ತಿದೆ. ಇದನ್ನು ಮೆಟ್ಟಿನಿಂತು ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.
ಸರ್ ಸಿ.ವಿ. ರಾಮನ್, ಎಸ್. ಚಂದ್ರಶೇಖರ್, ಅಬ್ದುಲ್ ಕಲಾಂ, ಸಿ.ಎನ್.ಆರ್. ರಾವ್, ಅವರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು, ವಿಜ್ಞಾನಿಗಳೇ ದೇಶದ ಬೆನ್ನೆಲುಬು. ಅವರಿಂದಲೇ ದೇಶ ಸುಧಾರಣೆಯತ್ತ ಮುಖ ಮಾಡಲು ಸಾಧ್ಯ. ಬೆಂಗಳೂರು ಸಹ ಮಾಹಿತಿ ತಂತ್ರಜ್ಞಾನದ ತವರೂರು ಎಂದರು.
ಇಸ್ರೋ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖ ವಿಜ್ಞಾನಿಗಳು ವಿಷಯ ಮಂಡನೆ ಮಾಡಿ ವಸ್ತು ವಿಜ್ಞಾನ, ಅಣು ವಿಜ್ಞಾನ, ಜೈವಿಕ ವಿಜ್ಞಾನ, ಬಾಹ್ಯಾಕಾಶಯಾನ ಮುಂತಾದವುಗಳಲ್ಲಾದ ಹೊಸ ಬೆಳವಣಿಗೆಗಳನ್ನು ಪ್ರಸ್ತುತಪಡಿಸಿದರು.
ಸಂವಾದದಲ್ಲಿ ಕರ್ನಾಟಕ ರಾಜ್ಯಪಾಲ ವಿ.ಆರ್.ವಾಲಾ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಟಿಆ, ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಉಪಸ್ಥಿತರಿದ್ದರು.