ಅ.30 ರಿಂದ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಅ.24: ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಪ್ರಥಮ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶ ವನ್ನು ಅ.30 ಹಾಗೂ 31ರಂದು ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ‘ಸರಕಾರಿ ಶಾಲೆಗಳು ಉಳಿಯಲಿ-ಬೆಳೆಯಲಿ-ನೆರೆಹೊರೆಯ ಸಮಾನ ಶಾಲೆಗಳಾಗಲಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ ಎಂದರು.
ಈಗಾಗಲೇ ಅನೇಕ ಪಂಚಾಯಿತಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿರುವ ಸಮನ್ವಯ ವೇದಿಕೆಯು ಮೊದಲ ಬಾರಿಗೆ ಎಲ್ಲ 225 ತಾಲೂಕುಗಳ ಪರವಾಗಿ ಪ್ರತಿನಿಧಿಸುವ ಸುಮಾರು 500 ಪ್ರಾತಿನಿಧಿಕ ಪ್ರತಿನಿಧಿಗಳನ್ನು ಒಳಗೊಂಡ ಪ್ರಥಮ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶ ಇದಾಗಿದೆ ಎಂದು ಹೇಳಿದರು.
ಈ ಸಮಾವೇಶವನ್ನು ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದರು.
ರಾಜ್ಯಮಟ್ಟದ ಎರಡು ದಿನಗಳ ಸಮುದಾಯ ಶೈಕ್ಷಣಿಕ ಸಮಾವೇಶದಲ್ಲಿ ರಾಜ್ಯವನ್ನು ಬಾಧಿಸುತ್ತಿರುವ ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಧಿವೇಶನಗಳನ್ನು ಸಂಘಟಿಸಲಾಗಿದೆ ಎಂದು ಅವರು, ಈ ಅಧಿವೇಶನದಲ್ಲಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ದಿನನಿತ್ಯ ಕೆಲಸ ನಿರ್ವಹಿಸುತ್ತಿರುವ ಪ್ರಾಯೋಗಿಕ ಹಾಗೂ ಸಾವಯವ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಚಳವಳಿಗಳ ಮುಂಚೂಣಿಯ ನಾಯಕರನ್ನು ಇಟ್ಟುಕೊಂಡು ಎಸ್‌ಡಿಎಂಸಿ, ಎಸ್‌ಡಿಎಂಸಿ ಸಮನ್ವಯ ವೇದಿಕೆ, ಶಿಕ್ಷಕರು, ನಾಗರಿಕ ಸಮಾಜದ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಮನ್ವಯಗೊಂಡು ಆಳವಾಗಿ ಅರ್ಥಪೂರ್ಣವಾಗಿ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.
ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯು ಸರಕಾರಕ್ಕೆ ಸಲ್ಲಿಸಿರುವ 21 ಶಿಫಾರಸ್ಸು ಕೇವಲ ನಮ್ಮ ರಾಜ್ಯಕ್ಕಷ್ಟೇ ಅಲ್ಲ, ದೇಶದ ಇತರ ರಾಜ್ಯಗಳು ಅನುಸರಿಸಬಹುದಾಗಿದೆ. ಈ ಸಮಿತಿಯ ಶಿಫಾರಸುಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಗೊಳಿಸಿ ಎಲ್ಲ ರಾಜ್ಯಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಉದ್ಘಾಟಿಸಲಿದ್ದು, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜೆ.ಶ್ರೀನಿವಾಸನ್, ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಪ್ರೊ.ಎಂ.ಗುರುಲಿಂಗಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದ ಮುಖ್ಯಸ್ಥ ಡಾ.ನಿರಂಜನಾರಾಧ್ಯ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯ ಸರಕಾರಕ್ಕೆ ನಾವು ಸಲ್ಲಿಸಿರುವ ವರದಿಯು ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಿ ಚರ್ಚೆಗೊಳಪಡಬೇಕು. ಶಿಕ್ಷಣ ಇಲಾಖೆಯು ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಸಮಾವೇಶದಲ್ಲಿ ಮುಖ್ಯಮಂತ್ರಿಯ ಎದುರು ಕನ್ನಡಿಗರ ಹಕ್ಕೊತ್ತಾಯವನ್ನು ಮಂಡಿಸಲಾಗುವುದು. ಸರಕಾರದ ಮೂಗು ಹಿಡಿದು ಈ ಕೆಲಸವನ್ನು ಅನುಷ್ಠಾನ ಮಾಡಿಸುತ್ತೇವೆ. ಇಲ್ಲದಿದ್ದರೆ, ಕ್ರಿಯಾಲೋಪ ಎತ್ತಲಾಗುವುದು.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ