×
Ad

ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲು

Update: 2017-10-24 21:40 IST

ಬೆಂಗಳೂರು, ಅ.23: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್‌ರನ್ನು ಕ್ರೂರಿ, ಮತಾಂಧ, ಅತ್ಯಾಚಾರಿ ಎಂದು ಅವಹೇಳನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಹಾಗೂ ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ನಗರದ 10ನೆ ಎಸಿಎಂಎಂ ನ್ಯಾಯಾಲಯದಲ್ಲಿ ದ ಹೆಲ್ಪಿಂಗ್ ಸಿಟಿಝನ್ ಸಂಘಟನೆಯ ಅಧ್ಯಕ್ಷ ಆಲಂ ಪಾಷ ದೂರು ದಾಖಲಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದನ್ನು ಟೀಕಿಸಿರುವ ಅನಂತ್‌ಕುಮಾರ್ ಹೆಗ್ಡೆ ಹಾಗೂ ಸಿ.ಟಿ.ರವಿ, ಟಿಪ್ಪು ಅವರ ವಿರುದ್ಧ ಆಧಾರ ರಹಿತವಾದ ಕೀಳುಮಟ್ಟದ ಆರೋಪಗಳನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ದೇಶಪೂರ್ವಕವಾಗಿ ಒಂದು ಸಮುದಾಯವನ್ನು ಅವಮಾನಿಸುವ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುವ ಪ್ರಯತ್ನ ನಡೆದಿದೆ. ಬಹಿರಂಗವಾಗಿ ದ್ವೇಷ ಕಾರುವ ಹೇಳಿಕೆಗಳನ್ನು ನೀಡುತ್ತಿರುವ ಇವರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಹಾಗೂ ರಾಜ್ಯದ ಶಾಸಕರು ಇಂತಹ ಪ್ರಯತ್ನಗಳು ನಡೆಸಿದರೆ ಜನರಲ್ಲಿ ಅಭದ್ರತೆಯ ವಾತಾವರಣ ಕಾಡುತ್ತದೆ. ಟಿಪ್ಪು ಸುಲ್ತಾನ್‌ರನ್ನು ಅತ್ಯಾಚಾರಿ ಎಂದು ಆರೋಪಿಸುತ್ತಿರುವ ಇವರ ಬಳಿ ಯಾವುದಾದರೂ ದಾಖಲೆಗಳಿವೆ ಎಂದು ಪ್ರಶ್ನಿಸಿದ ಅವರು, ದಾಖಲೆಗಳಿಲ್ಲದಿದ್ದರೆ ಇಂತಹ ಆರೋಪ ಮಾಡುವ ವ್ಯಕ್ತಿ ಕೇಂದ್ರ ಸಚಿವನಾಗಿ ಮುಂದುವರೆಯಲು ಹೇಗೆ ಸಾಧ್ಯ ಎಂದರು.

ಮೈಸೂರು ಸಂಸ್ಥಾನವನ್ನು ಆಳಿದ ದೊರೆ ಟಿಪ್ಪು ಸುಲ್ತಾನ್. ರಾಜ್ಯ ಸರಕಾರ ಆತ ಈ ನೆಲದ ಅರಸ, ಕನ್ನಡಿಗ ಎಂಬ ಕಾರಣಕ್ಕೆ ಸರಕಾರಿ ಕಾರ್ಯಕ್ರಮವಾಗಿ ಅವರ ಜಯಂತಿ ಆಚರಿಸುತ್ತಿದೆ. ನನ್ನ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಅ.31ರಂದು ಆದೇಶ ನೀಡಲಿದೆ ಎಂದು ಆಲಂ ಪಾಷ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News