ಕಲ್ಲಿದ್ದಲು ಅಭಾವದಿಂದ ಪ್ರತೀ ವರ್ಷ 500 ಕೋಟಿ ರೂ.ನಷ್ಟ: ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.24: ರಾಜ್ಯದಲ್ಲಿ ಕಲ್ಲಿದ್ದಲು ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ಅಭಾವದಿಂದಾಗಿ ಪ್ರತೀ ವರ್ಷ 500 ಕೋಟಿರೂ. ಹೆಚ್ಚು ನಷ್ಟವಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಷಾದಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ವಿದ್ಯುತ್ ಘಟಕಗಳಲ್ಲಿ ಒಂದು ದಿವಸಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲಿದೆ. ಹೀಗಾಗಿ ಎಲ್ಲ ರಾಜ್ಯಗಳು ಕಲ್ಲಿದ್ದಲು ಅಭಾವವನ್ನು ಅನುಭವಿಸುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ವತಿಯಿಂದಲೇ ಕಲ್ಲಿದ್ದಲು ಖರೀದಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಿಗೆ ಆಗುವ ಕಲ್ಲಿದ್ದಲನ್ನು ಕೇಂದ್ರದಿಂದಲೇ ನೇರವಾಗಿ ಸರಬರಾಜು ಮಾಡಿಕೊಳ್ಳಲು ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಆರೋಪ ನಿರಾಧಾರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಲ್ಲಿದ್ದಲು ಖರೀದಿ ಪ್ರಕರಣದಲ್ಲಿ ಖಾಸಗಿ ಕಂಪೆನಿಯ ಬದಲಿಗೆ ಸರಕಾರವೇ ದಂಡ ಪಾವತಿ ಮಾಡಿದೆ ಎಂದು ಆರೋಪ ಮಾಡಿದ್ದಾರೆ. ಇವರ ಆರೋಪ ನಿರಾಧಾರವಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪಾವತಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.